ನವದೆಹಲಿ: ಭೂಸ್ವಾಧೀನ ಕಾನೂನುಗಳ ದುರ್ಬಳಕೆಯನ್ನು ತೀವ್ರವಾಗಿ ಟೀಕಿಸಿರುವ ಸುಪ್ರೀಂ ಕೋರ್ಟ್, ಬೆಂಗಳೂರಿನ ನೆಲಕದಿರೇನಹಳ್ಳಿಯಲ್ಲಿ ಸಹಕಾರಿ ಗೃಹ ನಿರ್ಮಾಣ ಸಂಘವೊಂದಕ್ಕಾಗಿ ದಶಕಗಳ ಹಿಂದೆ ಕೈಗೊಂಡಿದ್ದ 59 ಎಕರೆಗೂ ಹೆಚ್ಚು ಭೂ ಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಿದೆ.
ಈ ಪ್ರಕ್ರಿಯೆ ವಂಚನೆಯಿಂದ ಕೂಡಿದೆ, ಅಧಿಕಾರವನ್ನು ದುರುದ್ದೇಶಪೂರಿತವಾಗಿ ಬಳಸಲಾಗಿದೆ ಮತ್ತು ಯಾವುದೇ ಗೃಹ ನಿರ್ಮಾಣ ಯೋಜನೆ ಅಥವಾ ಲೇಔಟ್ಗೆ ಸರ್ಕಾರದ ಪೂರ್ವಾನುಮತಿ ಪಡೆಯದೆಯೇ ಇದನ್ನು ನಡೆಸಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠ ಈ ಮೇಲ್ಮನವಿ ಪುರಸ್ಕರಿಸಿದೆ. ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪುನಃಸ್ಥಾಪಿಸಿದೆ. ಪ್ರಕರಣದಲ್ಲಿ ವಂಚನೆಯ ಅಂಶವು ಅತ್ಯಂತ ಗಂಭೀರ ಮತ್ತು ನಿರ್ವಿವಾದವಾಗಿದೆ ಎಂದು ಹೇಳಿದೆ.
ವಂಚನೆ ಮತ್ತು ಅಧಿಕಾರದ ದುರುಪಯೋಗಕ್ಕೆ ಸಂಬಂಧಿಸಿದ ಪ್ರಬಲ ವಾದಗಳನ್ನು ಪರಿಗಣಿಸಲು ವಿಫಲವಾದ ವಿಭಾಗೀಯ ಪೀಠದ ತೀರ್ಪನ್ನು ನಾವು ಎತ್ತಿಹಿಡಿಯಲು ಸಾಧ್ಯವಿಲ್ಲ. ಏಕಸದಸ್ಯ ಪೀಠ ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿತ್ತು. ಆದರೆ, ವಿಭಾಗೀಯ ಪೀಠ ಕೇವಲ ‘ರೆಸ್ ಜುಡಿಕಾಟಾ’ (ಈಗಾಗಲೇ ತೀರ್ಮಾನಿಸಲಾದ ವಿಷಯ) ಮತ್ತು ವಿಳಂಬದ ಆಧಾರದ ಮೇಲೆ ಆ ತೀರ್ಪನ್ನು ರದ್ದುಗೊಳಿಸಿತು. ವಂಚನೆ ಮತ್ತು ಅತಿಯಾದ ಪ್ರಭಾವ ಬಳಸಿ ಅಕ್ರಮವಾಗಿ ಭೂ ಸ್ವಾಧೀನಪಡಿಸಿಕೊಂಡಿರುವ ಆರೋಪಗಳು ಸಾಬೀತಾಗಿರುವಾಗ, ತಾಂತ್ರಿಕ ಆಕ್ಷೇಪಣೆಗಳಿಗೆ ಯಾವುದೇ ಮಹತ್ವವಿರುವುದಿಲ್ಲ ಎಂದು ನ್ಯಾಯಮೂರ್ತಿ ಚಂದ್ರನ್ ಹೇಳಿದರು.
ಪೆನ್ಸಿಲ್ವೇನಿಯಾ ಸುಪ್ರೀಂ ಕೋರ್ಟ್ನ ಪ್ರಕರಣವೊಂದರ ಅಭಿಪ್ರಾಯ ಉಲ್ಲೇಖಿಸಿದ ನ್ಯಾಯಮೂರ್ತಿ ಚಂದ್ರನ್, ಯಾವುದೇ ಸರ್ಕಾರಿ ಪ್ರಾಧಿಕಾರಕ್ಕೆ ಅನಿಯಮಿತ ಅಧಿಕಾರ ಇರುವುದಿಲ್ಲ ಮತ್ತು ಅದರ ನಿರ್ಧಾರಗಳು ನ್ಯಾಯಾಂಗ ಪರಿಶೀಲನೆಗೆ ಒಳಪಡಲೇಬೇಕು ಎಂದು ಹೇಳಿದರು. ಸಾರ್ವಜನಿಕ ಉದ್ದೇಶಕ್ಕಾಗಿ ಖಾಸಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಕಾನೂನಿನ ಅಧಿಕಾರವನ್ನು ಹೊಂದಿರಬೇಕು ಮತ್ತು ಅದಕ್ಕೆ ನ್ಯಾಯಯುತ ಪರಿಹಾರ ಪಾವತಿಸಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಕಾನೂನಿನ ಇಂತಹ ಅಧಿಕಾರವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಮಾತ್ರ ಚಲಾಯಿಸಬಹುದೆಂಬುದು ನಿರ್ವಿವಾದವಾಗಿದೆ. ‘ನ್ಯಾಯಯುತ ಪರಿಹಾರ’ ಎಂಬುದು ಒಂದು ಪೂರಕ ಹಕ್ಕಾಗಿದೆಯೇ ಹೊರತು, ಅದು ಸ್ವತಃ ಭೂಸ್ವಾಧೀನವನ್ನು ಸಮರ್ಥಿಸುವುದಿಲ್ಲ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿತು.
ಪರಿಹಾರವು ಎಷ್ಟೇ ನ್ಯಾಯಯುತವಾಗಿದ್ದರೂ, ಕಾನೂನಿನ ಅಧಿಕಾರ ಇಲ್ಲದಿದ್ದರೆ ಅಥವಾ ಸಾರ್ವಜನಿಕ ಉದ್ದೇಶ ಇಲ್ಲದಿದ್ದರೆ, ‘ಎಮಿನೆಂಟ್ ಡೊಮೇನ್’ (ಸರ್ಕಾರದ ಭೂಸ್ವಾಧೀನ ಅಧಿಕಾರ) ಅನ್ನು ಚಲಾಯಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. ಸರ್ಕಾರವು ‘ಭೂಸ್ವಾಧೀನ ಕಾಯಿದೆ’ಯ ಅಡಿ ಯಾವುದೇ ಸೂಕ್ತ ಭೂಸ್ವಾಧೀನ ಪ್ರಕ್ರಿಯೆಯನ್ನು ನಡೆಸಿಲ್ಲ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು. ಭೂಸ್ವಾಧೀನವನ್ನು ಪ್ರಶ್ನಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೇ ಭೂಮಿಯ ಸ್ವಾಧೀನವನ್ನು ಸಂಬಂಧಪಟ್ಟ ಭೂಮಾಲೀಕರಿಗೆ ಹಿಂತಿರುಗಿಸಬೇಕು ಎಂದು ಸೂಚನೆ ನೀಡಿತು.
ಸರ್ಕಾರದಿಂದ ಪರಿಹಾರ ಪಡೆದ ಭೂಮಾಲೀಕರು, ಆ ಹಣವನ್ನು ಬಡ್ಡಿಯಿಲ್ಲದೇ ಹಿಂತಿರುಗಿಸಬೇಕು. ಹಾಗೆಯೇ, ಈ ಭೂಮಿಗೆ ಸಂಬಂಧಿಸಿದ ಯಾವುದೇ ಖಾಸಗಿ ವ್ಯವಹಾರಗಳ ಮೇಲೆ ಈ ತೀರ್ಪಿನಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಪೀಠ ತಿಳಿಸಿತು. ಎನ್. ಅರಸಪ್ಪ ಮತ್ತು ಇತರರು ಸಲ್ಲಿಸಿದ್ದ ಮೇಲ್ಮನವಿಯ ಮೇರೆಗೆ ನ್ಯಾಯಪೀಠವು ಈ ತೀರ್ಪನ್ನು ನೀಡಿದೆ. ಪ್ರತಿವಾದಿ ಸಂಸ್ಥೆಯಾದ ‘ಕರ್ನಾಟಕ ಗೃಹ ನಿರ್ಮಾಣ ಸಹಕಾರ ಸಂಘ ಲಿಮಿಟೆಡ್’, ಭೂಮಿಯ ಸ್ವಾಧೀನವನ್ನು ಪಡೆದಿದ್ದರೂ ಅಥವಾ ಹಣವನ್ನು ಮರುಪಾವತಿಸಿದ್ದರೂ ಸಹ, ಆ ಭೂಮಿಯ ಮೇಲೆ ಯಾವುದೇ ಹಕ್ಕನ್ನು ಹೊಂದಿಲ್ಲ ಎಂದು ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.
ಭೂಮಾಲೀಕರು ಸರ್ಕಾರದಿಂದ ಪಡೆದ ಪರಿಹಾರವನ್ನು ಹಿಂತಿರುಗಿಸಲು ಸಾಧ್ಯವಾಗದಿದ್ದಲ್ಲಿ ಅಥವಾ ಹಿಂತಿರುಗಿಸಲು ಇಚ್ಛಿಸದಿದ್ದಲ್ಲಿ, ಅಂತಹ ಸಂದರ್ಭಗಳಲ್ಲಿ ಸರ್ಕಾರವು ಆ ಭೂಮಿಯನ್ನು ಬಹಿರಂಗ ಹರಾಜು (auction) ಮಾಡಬೇಕು. ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದೊಂದಿಗೆ ಸಮಾಲೋಚಿಸಿ, ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ, ಆದಾಯವನ್ನು ಸಂತ್ರಸ್ತರ ಪರಿಹಾರಕ್ಕೆ ಬಳಸಬೇಕು ಎಂದು ಪೀಠ ಹೇಳಿದೆ.
ಜಿಲ್ಲಾ ನ್ಯಾಯಾಧೀಶರ (ಆಯ್ಕೆ ದರ್ಜೆ) ಶ್ರೇಣಿಗಿಂತ ಕಡಿಮೆಯಿಲ್ಲದ ನ್ಯಾಯಾಂಗ ಅಧಿಕಾರಿಯ ಅಡಿಯಲ್ಲಿ ಕಂದಾಯ ಅಧಿಕಾರಿಗಳು ಹರಾಜನ್ನು ನಡೆಸುತ್ತಾರೆ ಎಂದು ಪೀಠ ಹೇಳಿದೆ. ಪೀಣ್ಯ ಮೂಲದ ಹೌಸ್ ಬಿಲ್ಡಿಂಗ್ ಕೋಆಪರೇಟಿವ್ ಸೊಸೈಟಿಯು ಸೆಪ್ಟೆಂಬರ್ 1984ರಲ್ಲಿ ನೆಲಕಡಿರನಹಳ್ಳಿಯಲ್ಲಿ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ಮೂರನೇ ವ್ಯಕ್ತಿಯ ಸಂಸ್ಥೆಯಾದ ಮೆಸರ್ಸ್ ಭಾಗ್ಯ ಎಂಟರ್ಪ್ರೈಸಸ್ನೊಂದಿಗೆ ಖಾಸಗಿ ಒಪ್ಪಂದ ಮಾಡಿಕೊಂಡಿತ್ತು.
ಆ ನಂತರ 1894ರ ಭೂಸ್ವಾಧೀನ ಕಾಯ್ದೆಯಡಿ 1988 ಮತ್ತು 1989 ರ ನಡುವೆ ರಾಜ್ಯ ಅಧಿಸೂಚನೆಗಳನ್ನು ಹೊರಡಿಸಲಾಗಿತ್ತು. 1989 ರಲ್ಲಿ ಸರಿಸುಮಾರು 59 ಎಕರೆ ಖರೀದಿಸಲು ನ್ಯಾಯಾಲಯವು ಆದೇಶಿಸಿತು. ಭೂಮಾಲೀಕರು 2007 ರಲ್ಲಿ ವ್ಯಾಪಕ ಅಕ್ರಮಗಳಾಗಿವೆ ಎಂದು ಉಲ್ಲೇಖಿಸಿ ಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದರು. ಈ ಬಗೆಗಿನ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ನ ಏಕ ಸದಸ್ಯಪೀಠ ಈ ಅಧಿಸೂಚನೆಗಳನ್ನು ರದ್ದುಗೊಳಿಸಿತ್ತು. ಆದಾಗ್ಯೂ, ನಂತರ ವಿಭಾಗೀಯ ಪೀಠವು ಪ್ರಾಥಮಿಕವಾಗಿ ವಿಳಂಬ ಮತ್ತು ಹಿಂದಿನ ತೀರ್ಪುಗಳ ತಾಂತ್ರಿಕ ಆಧಾರದ ಮೇಲೆ ತೀರ್ಪನ್ನು ರದ್ದುಗೊಳಿಸಿತ್ತು.
