ಹಾವೇರಿ: ಪೊಲೀಸ್ ಕಾನ್ಸ್ಟೇಬರ್ ಪರೀಕ್ಷೆಯಲ್ಲಿ 25 ಅಂಕ ಹಾಗೂ ಗ್ರಾಮ ಲೆಕ್ಕಾಧಿಕಾರಿ (VAO) ಪರೀಕ್ಷೆಯಲ್ಲಿ 151 ಅಂಕ ಪಡೆದ ಪ್ರಕರಣದ ತನಿಖೆ ಮುಂದುವರೆದಿದೆ. ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಅಧಿಕಾರಿಗಳ ಕರ್ತವ್ಯಲೋಪ ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ್ ದಾನಮ್ಮನವರ್ ಅವರು ನಾಲ್ವರು ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಅ.4ರಂದು ಶಿಗ್ಗಾಂವಿಯ ಮಾಮಲೇದೇಸಾಯಿ ಪದವಿಪೂರ್ವ ಕಾಲೇಜಿನಲ್ಲಿ ವಿಎಒ ಪರೀಕ್ಷೆ ನಡೆದಿದ್ದು, ಪರೀಕ್ಷಾ ಕೇಂದ್ರದ ಪ್ರಾಂಶುಪಾಲ, ಕೊಠಡಿ ಮೇಲ್ವಿಚಾರಕರು, ಚೆಕ್ಕಿಂಗ್ ಸಿಬ್ಬಂದಿ, ಡ್ರೆಸ್ ಕೋಡ್ ಆಫೀಸರ್ಗೆ ನೋಟಿಸ್ ನೀಡಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿ (VAO) ಪರೀಕ್ಷೆಯಲ್ಲಿ ಅಕ್ರಮ ಎಸಗಿ ಮೊದಲ ರ‍್ಯಾಂಕ್ ಗಳಿಸಿದ ಆರೋಪದ ಮೇಲೆ ಶಂಕರ್ ಬನ್ನೂರು ಎಂಬವರ ಮೇಲೆ ಶಿಗ್ಗಾಂವ್ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಅಲ್ಲದೇ ಇಂತಹದ್ದೊಂದು ಅಕ್ರಮ ನಡೆದಾಗ ಪ್ರಕರಣದಲ್ಲಿ ವಿವಿಧ ಅಧಿಕಾರಿಗಳು ಕೂಡ ಜವಾಬ್ದಾರಿಗಳಾಗಿರುತ್ತಾರೆ. ಹಾಗಾಗಿ ಕರ್ತವ್ಯಲೋಪ ಆರೋಪ ಹೇಳಿ ಬಂದ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ನಾಲ್ವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ತನಿಖೆ ನಡೆಯುತ್ತಿದೆ. ಪರೀಕ್ಷೆಯಲ್ಲಿನ ಅಕ್ರಮದಲ್ಲಿ ಶಾಮೀಲಾಗಿದ್ದಾರಾ? ಅಥವಾ ಇಲ್ಲವಾ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪರೀಕ್ಷೆಯಲ್ಲಿ ಮೊಬೈಲ್ ಬಳಸಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅಕ್ರಮ ಎಸಗಿದವನು ಒಬ್ಬನಾ ಅಥವಾ ಯಾರಾದರೂ ಇದ್ದಾರಾ ಎಂಬುದು ತನಿಖೆ ನಂತರ ಗೊತ್ತಾಗಲಿದೆ. ಸದ್ಯಕ್ಕೆ ನಾಲ್ವರಿಗೆ ನೋಟಿಸ್ ನೀಡಿದ್ದು, ಅವರ ಉತ್ತರ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಪರೀಕ್ಷಾ ಕೇಂದ್ರದಲ್ಲಿ ಜಾಮರ್ ಹಾಕಿದ್ದರೂ ಮೊಬೈಲ್ ಹೇಗೆ ಕೆಲಸ ಮಾಡಿತು? ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಇದೆಲ್ಲವೂ ಪೊಲೀಸ್ ತನಿಖೆಯ ನಂತರ ಬೆಳಕಿಗೆ ಬರಲಿದೆ ಎಂದು ತಿಳಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಇಲಾಖೆಯ ನಿಯಮದಂತೆ ಜಿಲ್ಲಾ ಹೆಚ್ಚುವರಿ ಎಎಸ್ಪಿ ಲಕ್ಷ್ಮಣ ಶಿರಕೋಳ ಅವರಿಗೆ ವಹಿಸಲಾಗಿದೆ ಎಂದು ಎಸ್ಪಿ ಯಶೋಧಾ ವಂಟಗೋಡಿ ಹೇಳಿದ್ದಾರೆ. ಎಎಸ್ಪಿಯವರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ಆರೋಪಿ ಶಂಕರ ಬನ್ನೂರ್ನನ್ನು ನ್ಯಾಯಾಂಗ ಬಂಧನದಿಂದ ಇವತ್ತು ಪೊಲೀಸ್ ವಶಕ್ಕೆ ತೆಗೆದುಕೊಂಡಿದ್ದೇವೆ. ಇಂದಿನಿಂದ ಪ್ರಕರಣದ ಕುರಿತು ಸಂಪೂರ್ಣ ವಿಚಾರಣೆ ನಡೆಯಲಿದೆ.
ಭದ್ರತೆಯಲ್ಲಿ ಯಾರಾರು ಇದ್ದರು, ಯಾರು ನಿರ್ಲಕ್ಷ್ಯ ತೆಗೆದುಕೊಂಡಿದ್ದಾರೆ ಎಂಬುದು ಗೊತ್ತಾಗಲಿದೆ. ನಿರ್ಲಕ್ಷ್ಯ ಯಾರು ತೋರಿದ್ದಾರೋ ಅವರ ಮೇಲೆ ಕ್ರಮ ಆಗಲಿದೆ. ಜಾಮರ್ ಬಗ್ಗೆಯೂ ವಿಚಾರಣೆ ಮಾಡಬೇಕಿದೆ. ಮೊಬೈಲ್ ಒಳಗಡೆ ಹೇಗೆ ಹೋಯಿತು? ಜಾಮರ್ ಇದ್ದರೂ ಹೇಗೆ ಕೆಲಸ ಮಾಡಿತು ಎಂಬುದರ ಕುರಿತು ಇಂದಿನಿಂದ ತನಿಖೆ ನಡೆಯಲಿದೆ. ಮೊಬೈಲ್ ಜಪ್ತಿ ಮಾಡಲಾಗಿದೆ. ಪರೀಕ್ಷೆಗೆ ಬಳಸಿದ್ದು ಅದೇ ಮೊಬೈಲೋ ಅಥವಾ ಬೇರೆ ಇದೆಯಾ ಎಂಬುದರ ಕುರಿತು ಇವತ್ತು ವಿಚಾರಣೆ ಆಗಲಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
