ಉಪಯುಕ್ತ ಸುದ್ದಿ

ದೀಪಾವಳಿ ಪಟಾಕಿ ಸಂಭ್ರಮಕ್ಕೆ ಸರಕಾರದಿಂದ ಬ್ರೇಕ್: ಪರಿಸರ ಸ್ನೇಹಿ ಪಟಾಕಿ ಬಳಕೆ, ರಾತ್ರಿ 8ರಿಂದ 10ರವರೆಗೆ ಮಾತ್ರವೇ ಪಟಾಕಿ: ಸಚಿವ ರಾಮಲಿಂಗಾ ರೆಡ್ಡಿ

Share It

ವಿಧಾನಸೌಧದಲ್ಲಿ ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಘೋಷಣೆ: ಹಸಿರು ಪಟಾಕಿಗಳಿಗೆ ಮಾತ್ರ ಅನುಮತಿ; ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಸಿಡಿಸಲು ಅವಕಾಶ

ಬೆಂಗಳೂರು: ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅರಣ್ಯ ಸಚಿವ ರಾಮಲಿಂಗ ರೆಡ್ಡಿ, ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ ಎಂದು ತಿಳಿಸಿದರು. ಸುಪ್ರೀಂ ಕೋರ್ಟ್ ಆದೇಶದಂತೆ 2026ರ ನವೆಂಬರ್ 8ರಿಂದ 10ರವರೆಗೆ ಪ್ರಮಾಣೀಕೃತ ಹಸಿರು ಪಟಾಕಿಗಳನ್ನು ಮಾತ್ರ ಬಳಸಲು ಅವಕಾಶವಿದ್ದು, ಅವುಗಳನ್ನು ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಸಿಡಿಸಬಹುದಾಗಿದೆ ಎಂದು ಹೇಳಿದರು.

ದೀಪಾವಳಿ ಬೆಳಕಿನ ಹಬ್ಬವಾಗಿದ್ದು, ಅತಿಯಾದ ಪಟಾಕಿ ಬಳಕೆಯಿಂದ ವಾಯು ಮತ್ತು ಶಬ್ದ ಮಾಲಿನ್ಯ ಹೆಚ್ಚಾಗಿ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಆದ್ದರಿಂದ ಪರಿಸರ ಸ್ನೇಹಿ ಆಚರಣೆಗೆ ಸರ್ಕಾರ ಆದ್ಯತೆ ನೀಡಿದೆ ಎಂದು ಸಚಿವರು ತಿಳಿಸಿದರು.

ಪ್ರಮುಖ ಮಾರ್ಗಸೂಚಿಗಳು

  • ಅಧಿಕೃತ ಲೋಗೋ ಹಾಗೂ ಕ್ಯೂಆರ್ ಕೋಡ್ ಹೊಂದಿರುವ ಹಸಿರು ಪಟಾಕಿಗಳಿಗೆ ಮಾತ್ರ ಮಾರಾಟ ಮತ್ತು ಬಳಕೆಗೆ ಅನುಮತಿ.
  • ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ.
  • ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಮೌನ ವಲಯಗಳಲ್ಲಿ ಪಟಾಕಿ ಸಿಡಿಸುವುದಕ್ಕೆ ಸಂಪೂರ್ಣ ನಿಷೇಧ.
  • ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಜಂಟಿ ತಂಡಗಳಿಂದ ಗೋದಾಮುಗಳ ಪರಿಶೀಲನೆ.
  • ಅಕ್ರಮ ಪಟಾಕಿಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು.
  • ರಾಜ್ಯದ ಗಡಿಭಾಗಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಿ ನಿಷೇಧಿತ ಪಟಾಕಿಗಳ ಸಾಗಣೆಗೆ ತಡೆ.
  • ಪರಿಸರ ಸ್ನೇಹಿ ದೀಪಾವಳಿ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ.

ಸಚಿವರ ಮನವಿ

“ದೀಪಾವಳಿ ಬೆಳಕಿನ ಹಬ್ಬ. ದೀಪಗಳನ್ನು ಹಚ್ಚುವ ಮೂಲಕ ಸಂಭ್ರಮಿಸಿ. ಪಟಾಕಿಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ವಾಯು ಹಾಗೂ ಶಬ್ದ ಮಾಲಿನ್ಯ ತಡೆಯುವ ಮೂಲಕ ಸ್ವಚ್ಛ ಮತ್ತು ಸುರಕ್ಷಿತ ದೀಪಾವಳಿಯನ್ನು ಆಚರಿಸೋಣ,” ಎಂದು ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಸಾರ್ವಜನಿಕರಿಗೆ ಮನವಿ ಮಾಡಿದರು.


Share It

You cannot copy content of this page