ರಾಜ್ಯದಲ್ಲಿ ಇಂತಹದೊಂದು “ಜಂಗಲ್ ರಾಜ್” ಕಾನೂನು ಜಾರಿಯಲ್ಲಿದೆಯಾ?
ಗೃಹಲಕ್ಷ್ಮಿ ದುಡ್ಡು ದೇವಸ್ಥಾನ ಕಟ್ಟೋಕೆ ೧ ವರ್ಷ ಕೊಡುವಂತೆ ತಾಕೀತು
ಸರ್ಕಾರ ಬಡವರಿಗೆ ಹಂಚಲು ಕೊಟ್ಟ ಪಡಿತರ ಅಕ್ಕಿ, ಸಕ್ಕರೆಯನ್ನು ಖಾಸಗಿ ವರ್ತಕರಿಗೆ ಮಾರಾಟ ಮಾಡಿ ಬಂದ ಹಣದಲ್ಲಿ ದೇವಾಲಯಗಳನ್ನು ನಿರ್ಮಿಸುವ ಕೆಲಸವನ್ನು ಕೆಲವು ಗ್ರಾಮಸ್ಥರು 1970 -80 ದಶಕದಲ್ಲಿ ಮಾಡುತ್ತಿದ್ದರು. ಇದು ಆಗ ಮುಖ್ಯಮಂತ್ರಿ ಆಗಿದ್ದ ದೇವರಾಜ್ ಅರಸು ಅವರ ಗಮನಕ್ಕೆ ಬಂತು. “ಬಡವರ ಹೊಟ್ಟೆಯ ಅನ್ನವನ್ನು ಧಾರ್ಮಿಕ ಕಾರ್ಯದ ಹೆಸರಿನಲ್ಲಿ ಕಿತ್ತುಕೊಳ್ಳುವುದು ಹಿಂಸೆ “ಎಂದು ಅರಸು ಗುಡುಗಿದ್ದರು. ಕಡ್ಡಾಯವಾಗಿ ಪಡಿತರ ಹಂಚಿಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು.
ಈ ಸಂಗತಿ ಏಕೆ ನೆನಪಾಯಿತು ಎಂದರೆ , ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಬದಿಯಲ್ಲಿ ಕುಳಿತ ಪರಿಚಿತ ಹಿರಿಯ ಮಹಿಳೆಯೊಬ್ಬರು ತಮಗೆ ಸರ್ಕಾರದಿಂದ ಬರುತ್ತಿರುವ ಗೃಹಲಕ್ಷ್ಮಿ2000 ರೂ ತಮ್ಮ ಗ್ರಾಮದ ಹಿರಿಯರು ದೇವಾಲಯ ನಿರ್ಮಾಣಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಗ್ರಾಮದ ಮಹಿಳೆಯರೆಲ್ಲ 1ವರ್ಷ ಗೃಹಲಕ್ಷ್ಮಿ ಹಣ ದೇವಸ್ಥಾನ ನಿರ್ಮಾಣಕ್ಕೆ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಗ್ರಾಮದ ಮಠಾಧಿಪತಿಗಳು ನೇತೃತ್ವ ವಹಿಸಿದ್ದಾರೆ.” ಇಲ್ಲ”ಎಂದು ಹೇಳಲು ಆಗದೆ, ತಾನು ಒಪ್ಪಿಕೊಂಡಿರುವುದಾಗಿ ಆತಂಕದಿಂದ ಮಹಿಳೆ ಹೇಳಿದಮಾತು ಕೇಳಿದಾಗ ಬಡವರ ಸೌಲಭ್ಯಗಳನ್ನು ಕಿತ್ತುಕೊಳ್ಳುವುದು ಹಿಂಸೆ ಎಂದು ಅರಸು ಗುಡುಗಿದ ಧ್ವನಿ ಮತ್ತೆ ಕಿವಿಗೆ ಅಪ್ಪಳಿಸಿದಂತಾಯಿತು.
ನಮ್ಮ ಈ ಸಂವಾದ ಆಲಿಸಿದ ಬಸ್ಸಿನಲ್ಲಿದ್ದ ಇನ್ನೊಬ್ಬ ಮಹಿಳೆ “ನಮ್ಮ ಊರಿನಲ್ಲಿಯೂ ದೇವಿಯ ರಥ ನಿರ್ಮಿಸುತ್ತಿದ್ದಾರೆ. ಅದಕ್ಕೆ ಗೃಹಲಕ್ಷ್ಮಿಯ ದುಡ್ಡು ಎಲ್ಲರೂ ಕೊಡಲೇಬೇಕು ಎಂದು ಮಠಾಧಿಪತಿಗಳು ಹೇಳಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸ್ಥಿತಿ ಅನುಭವಿಸುತ್ತಿದ್ದೇವೆ” ಎಂದರು. ಆ ಮಹಿಳೆಯ ಮಾತಿನಲ್ಲಿ ಸಿಟ್ಟು, ಅಸಮಾಧಾನ, ದುಃಖ ಮಡುಗಟ್ಟಿ ನಿಂತಿತ್ತು.
ಗೃಹಲಕ್ಷ್ಮಿ ಹಣ ಪಡೆದುಕೊಂಡು ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಯೋಜನೆಗಳು ಹಳ್ಳಿಗಳಲ್ಲಿ ಹುಟ್ಟತೊಡಗಿವೆ. ಪಠಾಧಿಪತಿಗಳು,ಧಾರ್ಮಿಕ ಮುಖಂಡರು, ಹಿರಿಯರು ಈ ಯೋಜನೆಯ ನೇತೃತ್ವ ವಹಿಸುತ್ತಿದ್ದಾರೆ. ಇನ್ನು ಕೆಲವು ಗ್ರಾಮಗಳಲ್ಲಿ ಒಂದೊಂದು ಸಮಾಜದವರು ತಮ್ಮ ಸಮಾಜದ ದೇವರ ಗುಡಿ ಕಟ್ಟುವ ಪ್ಲಾನ್ ಮಾಡುತ್ತಿದ್ದಾರೆ . ಇವರು ಕೂಡ ಗೃಹಲಕ್ಷ್ಮಿ ಹಣದ ಮೇಲೆ ಗುರಿ ಇಟ್ಟಿದ್ದಾರೆ.
ಮಹಿಳೆಯರು ಹೆಚ್ಚು ಧಾರ್ಮಿಕ ಮನೋಭಾವನೆ ಉಳ್ಳವರು. ಎಷ್ಟೇ ಕಷ್ಟಗಳಿದ್ದರೂ ಅವರು ಧಾರ್ಮಿಕ ಕಾರ್ಯಗಳಿಗೆ ಹಣ ಕೊಟ್ಟು ಬಿಡುತ್ತಾರೆ. ಈ ಮನೋಧರ್ಮವನ್ನು ಬಳಸಿಕೊಂಡು ಗೃಹಲಕ್ಷ್ಮಿ ಹಣ ಕಿತ್ತುಕೊಳ್ಳುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ.
ಮಹಿಳೆಯರ ನಿತ್ಯದ ಬದುಕಿನ ಅವಶ್ಯಕತೆಗಳಿಗೆ ನೆರವಾಗಿ ಅವರ ಕಷ್ಟ ದೂರ ಮಾಡುವ ಆಶಯದಿಂದ ಸರ್ಕಾರ ಗೃಹಲಕ್ಷ್ಮಿ ಯೋಜನೆ ರೂಪಿಸಿದೆ.ಇದು ಮಹಿಳಾ ಸಬಲೀಕರಣ ಪ್ರಕ್ರಿಯೆಯ ಮಹತ್ವದ ಹೆಜ್ಜೆಯಾಗಿದೆ.ಆದರೆ ಈ ಸಹಾಯಧನವನ್ನು ಗುಡಿ ಕಟ್ಟುವುದಕ್ಕೆ,ರಥ ನಿರ್ಮಾಣಕ್ಕೆ ಪಡೆದುಕೊಳ್ಳುವುದು ಮೂಲ ಉದ್ದೇಶ ಮತ್ತು ಆಶಯ ನಾಶ ಮಾಡುತ್ತದೆ.
ಗೃಹಲಕ್ಷ್ಮಿ ಸೌಲಭ್ಯ ಪಡೆಯುವ ಮಹಿಳೆಯರು ಹೆಚ್ಚಾಗಿ ಬಡವರಾಗಿದ್ದಾರೆ. ಅವರಿಂದ ದೊಡ್ಡ ಮಟ್ಟದ( ವಾರ್ಷಿಕ 24000ರೂ)ದೇಣಿಗೆ ಸಂಗ್ರಹಿಸುವುದು ಸರಿ ಕಾಣುವುದಿಲ್ಲ ಮಾತ್ರವಲ್ಲ, ಬಡ ಕುಟುಂಬಗಳು ಆರ್ಥಿಕವಾಗಿ ಸಬಲವಾಗದಂತೆ ಅಡ್ಡಿಪಡಿಸುವ ಹುನ್ನಾರ ಕೂಡ ಆಗಿರಬಹುದು ಎಂಬ ಅನುಮಾನ ಮೂಡುತ್ತದೆ.
ಸಾಮೂಹಿಕ ಪೂಜೆ, ಪ್ರವಚನ, ಧಾರ್ಮಿಕ ಸಮಾರಂಭಗಳಲ್ಲಿ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆಯರ ಹೆಸರುಗಳನ್ನು ವೇದಿಕೆಯ ಮೇಲೆ ಪ್ರಕಟಿಸುವುದು, ಅವರನ್ನು ಸನ್ಮಾನಿಸುವುದು ನಡೆಯುತ್ತಿದೆ. ನೋವಿನ ಸಂಗತಿ ಎಂದರೆ ಕೆಲವು ಮಹಿಳಾ ಮಂಡಳಗಳು ಮುಂದಾಗಿ ಮಹಿಳೆಯರ ಮನವೊಲಿಸಿ ಹಣ ಪಡೆಯುವ ಕೆಲಸ ಮಾಡುತ್ತಿವೆ. ಇದೊಂದು ಸಮಷ್ಟಿ ಕೆಲಸ ಎಂದು ಮಹಿಳಾ ಸಂಘಟನೆಗಳ ಸದಸ್ಯರು ಸಮರ್ಥಿಸುತ್ತಿರುವುದನ್ನು ನೋಡಿ ಬೇಸರವೆನಿಸುತ್ತದೆ.
ಉಳ್ಳವರು ಶಿವಾಲಯ ಮಾಡುವರು,
ನಾನೇನು ಮಾಡಲಯ್ಯ ಬಡವನು,
ಎನ್ನ ಕಾಲೇ ಕಂಬ ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ.
ಬಸವಣ್ಣನವರ ಈ ವಚನ ಬಡವರ ಹಣ ಪಡೆದು ಗುಡಿ ಕಟ್ಟುವವರಿಗೆ ತುಂಬ ಮಾರ್ಮಿಕವಾಗಿ ಉತ್ತರ ನೀಡುತ್ತದೆ.
ಮಹಿಳೆಯರಿಗೆ ತಮ್ಮ ವೈಯಕ್ತಿಕ ಬೇಡಿಕೆಗಳ ನಿರ್ವಹಣೆಗೆ ಗೃಹಲಕ್ಷ್ಮಿ ಹಣ ಬಹಳ ಅನುಕೂಲತೆ ಒದಗಿಸುತ್ತದೆ. ಸಣ್ಣಪುಟ್ಟ ಕಾಯಿಲೆಗಳಿಗೆ ಔಷಧ ಕೊಳ್ಳಲು , ತರಕಾರಿ ಖರೀದಿಸಲು, ಹಠ ಮಾಡುವ ಮೊಮ್ಮಕ್ಕಳ ಕೈಗೆ ಚಾಕ್ಲೇಟ್ ಬಿಸ್ಕೆಟ್ ಕೊಡಿಸಲು ಈ ಹಣ ನೆರವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಕೈಯಲ್ಲಿ ಸ್ವಲ್ಪ ದುಡ್ಡಿರುವುದು ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸುತ್ತದೆ . ಹಾಗೆಯೇ ಬೇರೆಯವರ ಬಳಿ ಸಹಾಯ ಯಾಚಿಸುವ ಸಂದರ್ಭಗಳು ಕಡಿಮೆಯಾಗುತ್ತವೆ.
ಮಹಿಳೆಯರ ಆರ್ಥಿಕ ಶಕ್ತಿ ಅವರ ಕೌಟುಂಬಿಕ ಉನ್ನತಿಗೆ ಕಾರಣವಾಗುತ್ತದೆ.ಬ್ರಿಟನ್, ನೆದರ್ಲ್ಯಾಂಡ್,ಬ್ರೆಜಿಲ್ ದೇಶಗಳಲ್ಲಿ ಮೂಲ ಆದಾಯದ ರೂಪದಲ್ಲಿಯೇ ಮಹಿಳೆಯರಿಗೆ ಪ್ರತಿ ತಿಂಗಳು ಹಣ ಕೊಡುವ ವಿಧಾನ ಅನುಸರಿಸಲಾಗುತ್ತದೆ.ಇದು ಅಲ್ಲಿಯ ಮಹಿಳೆಯರ ಸಾಮಾಜಿಕ ಉನ್ನತಿಗೆ ಪ್ರಮುಖ ಕಾರಣವಾಗಿದೆ.
ಮಹಿಳೆಯ ಬಳಿ ಸ್ವಲ್ಪ ಸ್ವಂತದ ಹಣ ಸದಾಕಾಲ ಇರುವುದು ಆಕೆಯ ಸುರಕ್ಷತೆಯ ಮೊದಲು ಹೆಜ್ಜೆಯಾಗಿದೆ ಎಂದು ಅಮೆರಿಕದ ಲೇಖಕಿ ಕ್ಲೇರ್ ಬೂತ್ ಲುಸೆ ಹೇಳುವ ಮಾತು ಬಹಳ ವಾಸ್ತವದಿಂದ ಕೂಡಿದೆ. ಪ್ರಗತಿಪರ ಧೋರಣೆಯ ಹಿರಿಯರು,ಸಮಾಜ ಕಾರ್ಯಕರ್ತರು ಗೃಹಲಕ್ಷ್ಮಿಯ ಹಣ ಧಾರ್ಮಿಕ ಕಾರ್ಯಗಳ ಹೆಸರಿನಲ್ಲಿ ಮಹಿಳೆಯರ ಕೈಜಾರಿ ಹೋಗದಂತೆ ಮಾರ್ಗದರ್ಶನ ಮಾಡಬೇಕು. ಸರ್ಕಾರ ಎಚ್ಚರಿಕೆಯ ಸುತ್ತೋಲೆ ಹೊರಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
- ಮಲ್ಲಿಕಾರ್ಜುನ ಹೆಗ್ಗಳಗಿ,
9379090059