ರಾಜಕೀಯ ಸುದ್ದಿ

ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರತಿ ಗ್ರಾಮ ಪಂಚಾಯಿತಿಗೂ ತಲಾ 1 ಕೋಟಿ ಅನುದಾನ: ಕೆ. ಎಚ್ ಮುನಿಯಪ್ಪ.

Share It

ದೇವನಹಳ್ಳಿ: ಮಹೇಶ್ವರಮ್ಮ, ಗಂಗಮ್ಮ, ಮದ್ದೂರಮ್ಮ, ಪಳೇಕಮ್ಮ ದೇವರುಗಳನ್ನು ಸಿಂಗ್ರಹಳ್ಳಿಯಲ್ಲಿ ಸುಮಾರು 700 ವರ್ಷಗಳಿಂದಲೂ ಪೂಜಿಸುತ್ತಾ ಬರಲಾಗುತ್ತಿದೆ ಎಂಬ ಐತಿಹ್ಯ ಇದೆ, ಇಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಈ ದೇವರುಗಳನ್ನು ಪ್ರಮುಖವಾಗಿ ಪೂಜಿಸಲಾಗುತ್ತದೆ ಈ ದೇಗುಲವು ಐತಿಹಾಸಿಕ ಹಿನ್ನೆಲೆ ಹೊಂದಿರುವ ಪುರಾತನ ದೇವಸ್ಥಾನವಾಗಿದ್ದು, ಈ ಭಾಗದ ಸುತ್ತಮುತ್ತಲಿನ ಜನರು ಭಕ್ತಿ ಭಾವದಿಂದ ಪೂಜಿಸುವ ಮೂಲಕ ಊರಿನಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಕಾರಣವಾಗಿದೆ, ಎಂದು ಆಹಾರ, ನಾಗರಿಕ ಪೂರೈಕೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆಎಚ್.ಮುನಿಯಪ್ಪ ತಿಳಿಸಿದರು.

ದೇವನಹಳ್ಳಿ ತಾಲ್ಲೂಕಿನ ಸಿಂಗ್ರಹಳ್ಳಿಯಲ್ಲಿ ಮಹೇಶ್ವರಮ್ಮ, ಗಂಗಮ್ಮ, ಪಳೇಕಮ್ಮ ದೇವರುಗಳ ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ಭಾಗವಹಿಸಿ ಅವರು ಮಾತನಾಡಿದರು. ತಾಲ್ಲೂಕಿನ ಗ್ರಾಮೀಣ ಪ್ರದೇಶದ ರಸ್ತೆಗಳು ಸೇರಿದಂತೆ ನಗರ ಪ್ರದೇಶಗಳಲ್ಲಿಯೂ ರಸ್ತೆಗಳು ಹಾಳಾಗಿವೆ, ಚುನಾವಣಾ ನೀತಿ ಸಂಹಿತೆ ತೆರವಾದ ನಂತರ ಪ್ರತಿ ಗ್ರಾಮ ಪಂಚಾಯಿತಿಗೂ ಅಗತ್ಯ ಮೂಲ ಸೌಕರ್ಯಗಳ ಅಭಿವೃದ್ಧಿಗೆ ತಲಾ ಒಂದು ಕೋಟಿ ರೂಗಳ ಅನುದಾನವನ್ನು ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿ ಗಳಿಗೂ ಬಿಡುಗಡೆ ಮಾಡಲಾಗುತ್ತದೆ‌.

ರಾಜಕಾರಣದಲ್ಲಿ ಮತ್ತೆ ತೊಡಗಿಕೊಳ್ಳಲು ತಾಲೂಕಿಗೆ ಬಂದ ಕೆಲವೇ ದಿನಗಳಲ್ಲಿ ನನ್ನನ್ನು ಬೆಂಬಲಿಸಿ ರಾಜಕೀಯವಾಗಿ ಪುನರ್ಜನ್ಮ ನೀಡಿದ ದೇವನಹಳ್ಳಿ ಕ್ಷೇತ್ರದ ಮತದಾರರನ್ನು ನಾನು ಮರೆಯುವುದಿಲ್ಲ ತಮ್ಮೆಲ್ಲರ ಆಶೀರ್ವಾದದಿಂದ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕಾಣಲಿದೆ ಎಂದರು.

ಸಿಂಗ್ರಹಳ್ಳಿಯ ದೇಗುಲದ ಪುನರ್ ನಿರ್ಮಾಣ ಕಾರ್ಯಕ್ಕೆ ಸಮಾಜ ಸೇವಕ ರೊನಾಲ್ಡ್ ಕೊಲಾಸೋ ಅವರ ಸಹಕಾರ ಬಹಳ ಮಹತ್ವದ್ದು ಹತ್ತು ಹಲವು ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಿರುವ ಅವರು ಕ್ರೈಸ್ತ ಧರ್ಮದವನ್ನು ಅನುಸರಿಸುವವರಾದರು ಹಿಂದು ಧರ್ಮದ ದೇಗುಲಗಳ ನಿರ್ಮಾಣಕ್ಕೆ ಸಹಕರಿಸಿರುವುದು ಅವರ ಸಾಮಾಜಿಕ ಸೌಹಾರ್ದತೆಯ ಬದ್ಧತೆಯನ್ನು ತೋರಿಸುತ್ತದೆ ದೇವರು ಅವರಿಗೆ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಶುಭ ತರಲಿ ಎಂದು ಹಾರೈಸುತ್ತೇನೆ ಎಂದು ಸಚಿವರು ನುಡಿದರು.

ಉದ್ಯಮಿ, ಸಮಾಜ ಸೇವಕ ರೊನಾಲ್ಡ್ ಕೊಲಾಸೋ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆಗಳ ನವೀಕರಣ ಕಾರ್ಯ ಮಾಡಿ ಮಾತೃ ಭಾಷೆ ಕನ್ನಡದ ಜೊತೆಗೆ ಗುಣಮಟ್ಟದ ಆಂಗ್ಲ ಮಾದ್ಯಮವನ್ನು ಪ್ರಾರಂಬಿಸುವ ಹಂಬಲ ಹೊಂದಿದ್ದೇನೆ. ಸಿಂಗ್ರಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಮಹೇಶ್ವರಮ್ಮ, ಗಂಗಮ್ಮ, ಮದ್ದೂರಮ್ಮ, ಪಳೇಕಮ್ಮ ದೇವರುಗಳನ್ನು ಈ ಭಾಗದಲ್ಲಿರುವ ಜನರು ಪುರಾತನ ಕಾಲದಿಂದಲೂ ಪೂಜಿಸುತ್ತಾ ಬಂದಿರುವ ಬಗೆಗಿನ ಇತಿಹಾಸವಿದೆ.

ಇಂತಹ ದೇವಸ್ಥಾನದ ಪುನರ್ ನವೀಕರಣಕ್ಕೆ ಗ್ರಾಮಸ್ಥರೆಲ್ಲರು ಒಳ್ಳೆಯ ಮನಸ್ಸಿನನಿಂದ ನಮ್ಮ ಜೊತೆಗೆ ಕೈ ಜೋಡಿಸಿದ್ದರ ಪರಿಣಾಮ ಅತ್ಯದ್ಭುತ ವಾಗಿ ದೇಗುಲ ನಿರ್ಮಾಣವಾಗಲು ಸಾಧ್ಯವಾಗಿದೆ. ಪ್ರತಿ ವರ್ಷ ಇಲ್ಲಿ ನಡೆಯುವ ಜಾತ್ರೆಗೆ ಸುತ್ತಮುತ್ತಲಿನ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ದೇವರ ಆಶೀರ್ವಾದ ಪಡೆಯುತಾರೆ. ಸಮಾಜದ ಭಾಗವಾಗಿರುವ ನಾವು ದುಡಿಮೆಯಲ್ಲಿ ಸ್ವಲ್ಪ ಭಾಗ ಸಮಾಜ ಸೇವೆಗಾಗಿ ಮೀಸಲಿಟ್ಟರೆ ಮಾತ್ರ ಸೇವಾ ಬದುಕು ಸಾರ್ಥಕವಾಗುತ್ತದೆ, ಎಂದರು.

ಈ ಸಂದರ್ಭದಲ್ಲಿ ಶಿಕ್ಷಣ ತಜ್ಞ ಮತ್ತು ಲೇಖಕರಾದ ಪ್ರೋ|| ಕೆಇ ರಾಧಾಕೃಷ್ಣ, ಬಯಪ ಅಧ್ಯಕ್ಷ ಶಾಂತಕುಮಾರ್, ಜಿ.ಪಂ. ಮಾಜಿ ಸದಸ್ಯ ಚನ್ನಹಳ್ಳಿ ರಾಜಣ್ಣ, ಕೆಸಿ ಮಂಜುನಾಥ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಕಾಂಗ್ರೆಸ್ ಮುಖಂಡರುಗಳಾದ ಅಣ್ಣೇಶ್ವರ ಚಂದ್ರಶೇಖರ್, ವಿಜಯಪುರ ಮಂಜುನಾಥ್, ಜಗನ್ನಾಥ್, ಮಾಜಿ ಅಧ್ಯಕ್ಷ ಚಿನ್ನಪ್ಪ, ಪ್ರಧಾನ ಕಾರ್ಯದರ್ಶಿ ನಾಗೇಗೌಡ, ಶ್ರೀರಾಮ ಸೇವಾ ಬಳಗದ ಅಧ್ಯಕ್ಷ ಕಿಟ್ಟಿಗೌಡ, ಗ್ರಾ.ಪಂ. ಅಧ್ಯಕ್ಷ ಎಸ್‌ಪಿ. ಮುನಿರಾಜು, ಕೆಂಪತಿಮ್ಮನಹಳ್ಳಿ ಲಕ್ಷ್ಮಿಕಾಂತ್ , ವಿಜಯಪುರ ಸೈಪುಲ್ಲಾ, ಗ್ರಾಮಸ್ಥರಾದ ಅಣ್ಣಯ್ಯಪ್ಪ, ಪ್ರವೀಣ್, ಪ್ರಮೋದ್, ಸಂಪತ್,ಸಂದೀಪ್, ಮುರಳಿ ಪ್ರಧಾನ ಅರ್ಚಕ ಲಕ್ಷ್ಮೀಕಾಂತ್, ಮುಂತಾದವರು ಇದ್ದರು.


Share It

You cannot copy content of this page