ಬೆಂಗಳೂರು: ಪ್ರಜ್ವಲ್ ರೇವಣ್ಣ ಶರಣಾಗುವ ಮಾತುಗಳನ್ನಾಡುತ್ತಿರುವ ಬೆನ್ನಲ್ಲೇ ಭವಾನಿ ರೇವಣ್ಣ ಅವರಿಗೆ ಬಂಧನ ಭೀತಿ ಎದುರಾಗಿದೆ. ಹೀಗಾಗಿ, ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯೊಬ್ಬರ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ ಅವರಿಗೆ ಎಸ್‌ಐಟಿ ನೊಟೀಸ್ ನೀಡಿದೆ. ಇದರ ಆಧಾರದ ಮೇಲೆ ಅವರನ್ನು ಎಸ್‌ಐಟಿ ಬಂಧನ ಮಾಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಮಾಜಿ ಸಚಿವ ಎಚ್.ಡಿ.ರೇವಣ್ಣ ಕೂಡ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಇದೀಗ ಕಿಡ್ನಾಪ್ ಪ್ರಕರಣದಲ್ಲಿ ಭವಾನಿ ಕೂಡ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಭವಾನಿ ಡ್ರೈವರ್ ಗೂ ಎಸ್‌ಐಟಿ ನೊಟೀಸ್ ನೀಡಿದ್ದು, ಆತ ಕೂಡ ತಲೆಮರೆಸಿಕೊಂಡಿದ್ದಾನೆ.
ಪ್ರಜ್ವಲ್ ವಿದೇಶದಲ್ಲಿ ಅಡಗಿಕೊಂಡು, ಎಸ್‌ಐಟಿ ಮುಂದೆ ತನಿಖೆಗೆ ಹಾಜರಾಗದಿರುವುದು, ಪ್ರಕರಣದಲ್ಲಿರುವ ಮತ್ತೊಬ್ಬ ಆರೋಪಿ ಕಾರು ಚಾಲಕ ತಪ್ಪಿಸಿಕೊಂಡಿರುವುದು, ಹೀಗೆ ತನಿಖೆಗೆ ಸಹಕಾರ ನೀಡುವುದಿಲ್ಲ ಎಂಬ ಕಾರಣಕ್ಕೆ ಎಸ್‌ಐಟಿ ಪರ ವಕೀಲರು ಜಾಮೀನು ನೀಡದಂತೆ ನ್ಯಾಯಾಲಯದ ಮುಂದೆ ಮನವಿ ಮಾಡುತ್ತಿದ್ದಾರೆ.
ಹೀಗಾಗಿಯೇ, ರೇವಣ್ಣ ಅವರಿಗೆ ಜಾಮೀನು ಸಿಗುವುದು ತಡವಾಗಿತ್ತು. ಇದೀಗ ಭವಾನಿ ರೇವಣ್ಣ ಅವರು, ನ್ಯಾಯಾಲಯದ ಮೊರೆ ಹೋಗಿದ್ದು, ಒಂದು ವೇಳೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡದಿದ್ದರೆ, ಅವರು ಕೂಡ ಜೈಲು ಪಾಲಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬಂಧನ ತಪ್ಪಿಸಿಕೊಳ್ಳಲು ಅವರು ನಿರೀಕ್ಷಣಾ ಜಾಮೀನಿಗಾಗಿ ಮೊರೆ ಹೋಗಿದ್ದಾರೆ.