ಆಪರೇಷನ್ ಹಸ್ತಕ್ಕೆ ಕಮಲ ಸುಸ್ತು !
ಬೆಂಗಳೂರು:
ಆಪರೇಷನ್ ಕಮಲದಿಂದಲೇ ಫೇಮಸ್ ಆಗಿರೋ ಬಿಜೆಪಿಗೆ ಭಯವಾಗುವಷ್ಟರ ಮಟ್ಟಿಗೆ ಕಾಂಗ್ರೆಸ್ ಆಪರೇಷನ್ ಹಸ್ತ ನಡೆಸುತ್ತಿದೆ. ಆದರೆ, ಬಿಜೆಪಿ ಗೆಲುವಿನ ನಂತರ ಆಪರೇಷನ್ ಮಾಡಿದ್ರೆ, ಕಾಂಗ್ರೆಸ್ ಚುನಾವಣೆ ಮುಂಚೆ ಮಾಡ್ತಿದೆ. ವ್ಯತ್ಯಾಸ ಇಷ್ಟೇ.
ಡಿ.ಕೆ.ಶಿವಕುಮಾರ್ ತಂತ್ರಗಾರಿಕೆಯ ನೈಪುಣ್ಯತೆ ಸಾಧಿಸುತ್ತಲೇ ಸೈಲೆಂಟ್ ಆಗಿ ಆಪರೇಷನ್ ಹಸ್ತ ಮಾಡುತ್ತಿದ್ದಾರೆ. ಅನೇಕ ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಗೆ ಈ ವಿಷಯವೇ ಕಂಟಕವಾಗುತ್ತಿದೆ. ಚುನಾವಣೆವರೆಗೆ ಇದೇ ಕಾಂಗ್ರೆಸ್ ಪಾಲಿಗೆ ದೊಡ್ಡ ಅಸ್ತ್ರವಾಗಲಿದೆ.
ಗ್ರಾಮ ಪಂಚಾಯತಿ ಮಟ್ಟದಿಂದ ಹಿಡಿದು, ಲೋಕಸಭೆ ಆಕಾಂಕ್ಷೆಗಳ ಮಟ್ಟದವರೆಗೆ ಇಂತಹ ಪ್ರಕ್ರಿಗೆ ಪ್ರಗತಿಯಲ್ಲಿದೆ. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಅನೇಕ ಗ್ರಾಮ ಪಂಚಾಯತಿ ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಡಿಕೆಶಿ, ಕ್ಷೇತ್ರ ಪೂರ್ತಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಆಪರೇಷನ್ ನಡೆಸಿಯೇ ತೀರುತ್ತಿದ್ದಾರೆ. ಸಿ.ಪಿ.ಯೋಗೇಶ್ವರ್ ಪುತ್ರಿ, ಮರಳಿ ಕಾಂಗ್ರೆಸ್ ಸೇರ್ಪಡೆಯಾಗುವ ಆಶಯ ವ್ಯಕ್ತಪಡಿಸಿದ್ದು, ಬಿಜೆಪಿ ದೊಡ್ಡ ಪ್ರಮಾಣದ ಹಿನ್ನಡೆಯನ್ನಂತು ಮಾಡಲಿದೆ.
ಬೆಂಗಳೂರು ದಕ್ಷಿಣದಲ್ಲಿ ಪದ್ಮನಾಭ ನಗರ ಕ್ಷೇತ್ರ ವ್ಯಾಪ್ತಿಯ ಮಾಜಿ ಮೇಯರ್ ಎಂ. ಶ್ರೀನಿವಾಸ್ ಸೇರಿದಂತೆ ಅನೇಕ ಬಿಬಿಎಂಪಿ ಸದಸ್ಯರು ಕಾಂಗ್ರೆಸ್ ಸೇರಿದರು. ಅವರ ಪುತ್ರ ಪ್ರಮೋದ್ ಶ್ರೀನಿವಾಸ್ ಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಕ್ಷೇತ್ರಾಧ್ಯಕ್ಷ ಸ್ಥಾನ ನೀಡಲಾಗಿದ್ದು, ಇದು ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಗೆ ಲಾಭವಾಗಲಿದೆ.
ಬಿಜೆಪಿಯ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಅವರು ಕಾಂಗ್ರೆಸ್ ಸೇರುವ ಮೂಲಕ ತಮಗೆ ಟಿಕೆಟ್ ಸಿಗದಿರುವ ಆಕ್ರೋಶವನ್ನು ಹೊರ ಹಾಕಿದ್ದಾರೆ. ಸದಾನಂದ ಗೌಡ ಜತೆಗೆ ಮಾತುಕತೆ ನಡೆಯಿತಾದರೂ, ಕಾರಣಾಂತರದಿಂದ ಅವರು ಪಕ್ಷ ಸೇರಿಲ್ಲ, ಆದರೆ, ಬಿಜೆಪಿ ಪರ ಯಾವುದೇ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿಲ್ಲ. ಇದು ಕಾಂಗ್ರೆಸ್ ಗೆ ಲಾಭವೇ ಆಗಲಿದೆ.
ಮಂಡ್ಯ ಮತ್ತು ಹಾಸನದ ಅನೇಕ ಜೆಡಿಎಸ್ ಮುಖಂಡರು, ಬಿಜೆಪಿಯ ಕೆಲ ನಾಯಕರು ಕಾಂಗ್ರೆಸ್ ಗೆ ಆಹ್ವಾನ ಮಾಡಲಾಗಿದೆ. ಡಿ.ಕೆ.ಶಿವಕುಮಾರ್ ಚುನಾವಣೆ ಆರಂಭಕ್ಕೆ ಮೊದಲೇ ಪಕ್ಷ ಸೇರ್ಪಡೆಗೆ ಕರೆ ಕೊಟ್ಟಿದ್ದರು. ಅದು ಈಗ ವ್ಯಾಪಕವಾಗಿ ಕೆಲಸ ಮಾಡುತ್ತಿದೆ. ತುಮಕೂರಿನ ಮಾಧುಸ್ವಾಮಿ ನೇರವಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ನಿಂತಿದ್ದಾರೆ. ಬೆಂಗಳೂರು ಉತ್ತರದಲ್ಲಿ ಎಸ್.ಟಿ.ಸೋಮಶೇಖರ್, ಬಿಜೆಪಿಗೆ ಸವಾಲು ಹಾಕಿ ಕಾಂಗ್ರೆಸ್ ಅಭ್ಯರ್ಥಿ ಗೆ ಬೆಂಬಲ ನೀಡುತ್ತಿದ್ದಾರೆ.
ಹೀಗೆ ಅನೇಕ ಜಿಲ್ಲೆಗಳಲ್ಲಿ ಆಪರೇಷನ್ ಹಸ್ತ ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಯ ಗೆಲುವಿನಲ್ಲಿ ಈ ಅಂಶ ಪ್ರಮುಖ ಪಾತ್ರ ವಹಿಸಲಿದೆ. ಈ ಆಪರೇಷನ್ ಹಸ್ತದ ಕಾರ್ಯಾಚರಣೆ ನಾಯಕತ್ವ ವಹಿಸುವ ಡಿ.ಕೆ. ಶಿವಕುಮಾರ್ ಬಿಜೆಪಿ ಪಾಲಿಗೆ ಸವಾಲಾಗಿದ್ದಾರೆ.