ಅಪರಾಧ ರಾಜಕೀಯ ಸುದ್ದಿ

ಯೋಗಿಶ್ ಗೌಡ ಕೊಲೆ ಕೇಸ್: ಶಾಸಕ ವಿನಯ್ ಕುಲಕರ್ಣಿ ಅರ್ಜಿ ವಜಾ

Share It

ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೋಗೀಶ್‌ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿಗದಿಪಡಿಸಿರುವ ಆರೋಪ ನಿಗದಿಯಲ್ಲಿ ಸಾಕಷ್ಟು ದೋಷಗಳಿವೆ ಎಂದು ಆಕ್ಷೇಪಿಸಿ ಪ್ರಕರಣದ ಆರೋಪಿ ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಸೋಮವಾರ ವಜಾ ಮಾಡಿದೆ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯದಲ್ಲಿ ವಿನಯ್‌ ಕುಲಕರ್ಣಿ ವಿರುದ್ಧದ ಪ್ರಕ್ರಿಯೆ ಮುಂದುವರಿಯಲಿದೆ.

ಮಾರ್ಚ್‌ 15ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠ ಇಂದು ಪ್ರಕಟಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ತಮ್ಮ ವಿರುದ್ಧದ ಆರೋಪ ನಿಗದಿ ಮತ್ತು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ (ಸತ್ರ) ನ್ಯಾಯಾಲಯದಲ್ಲಿ ನಡೆಯಲಿರುವ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ವಿನಯ್‌ ಕುಲಕರ್ಣಿ ಕೋರಿದ್ದರು. ಇದಕ್ಕೆ ಪೀಠ ಸಮ್ಮತಿಸಿಲ್ಲ.

ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್‌ 15ರಂದು ಯೋಗೀಶ್‌ಗೌಡ ಅವರ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಟ್ಟು 21 ಆರೋಪಿಗಳ ವಿರುದ್ಧ ಆರೋಪ ನಿಗದಿಪಡಿಸಿ 2024ರ ಜನವರಿ 29ರಿಂದ ಫೆಬ್ರವರಿ 1ರವರೆಗೆ ನಿಯಮಿತವಾಗಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಆದೇಶಿಸಿತ್ತು. ಇದನ್ನು ವಿನಯ್‌ ಕುಲಕರ್ಣಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ವಿನಯ್‌ ಕುಲಕರ್ಣಿ ಪರವಾಗಿ ಹಿರಿಯ ವಕೀಲ ಸಿ ವಿ ನಾಗೇಶ್‌ ವಾದಿಸಿದ್ದರು. ಕೇಂದ್ರಿಯ ತನಿಖಾ ದಳದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌ ವಾದಿಸಿದ್ದರು.


Share It

You cannot copy content of this page