ರಾಜಕೀಯ ಸುದ್ದಿ

ಲೋಕಸಭಾ ಚುನಾವಣೆ ಫಲಿತಾಂಶ ಹಿನ್ನೆಲೆ: ದೆಹಲಿಯಲ್ಲಿಂದು ಇಂಡಿಯಾ ಮೈತ್ರಿಕೂಟದ ಸಭೆ

Share It

ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶದ ನಿರೀಕ್ಷೆಯಲ್ಲಿರುವ ಇಂಡಿಯಾ ಬ್ಲಾಕ್ ನಾಯಕರು ಇಂದು ದೆಹಲಿಯಲ್ಲಿ ಸಭೆ ನಡೆಸಲಿದ್ದಾರೆ.

ಟಿಎಂಸಿ ಮತ್ತು ಪಿಡಿಪಿ ಸಭೆಯಿಂದ ಹೊರಗುಳಿಯಲು ಸಿದ್ಧವಾಗಿದ್ದರೂ, ಜೂನ್ 4ರಂದು ಮತ ಎಣಿಕೆಗೆ ತಮ್ಮ ಕಾರ್ಯತಂತ್ರವನ್ನು ಚರ್ಚಿಸಲು ಇಂಡಿಯಾ ಬಣದ ಹಿರಿಯ ನಾಯಕರು ಭೇಟಿಯಾಗಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿ ನಿವಾಸದಲ್ಲಿ ಕಾಂಗ್ರೆಸ್, ಸಿಪಿಐಎಂ, ಸಿಪಿಐ, ಡಿಎಂಕೆ, ಎಐಡಿಎಂಕೆ, ಆರ್‌ಜೆಡಿ, ಶಿವಸೇನೆ ಮತ್ತು ಎನ್‌ಸಿಪಿ ಹಿರಿಯ ನಾಯಕರು ಚರ್ಚೆ ನಡೆಸಲಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಇರುವುದರಿಂದ ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಭೆಗೆ ಹಾಜರಾಗುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಜೊತೆಗೆ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಸಭೆಯಿಂದ ಹೊರಗುಳಿಯುವ ಸಾಧ್ಯತೆಯಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಪಂಜಾಬ್ ಸಿಎಂ ಭಗವಂತ್ ಮಾನ್, ಆಪ್ ಸಂಸದ ಸಂಜಯ್ ಸಿಂಗ್ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸೇರಿ ಮೈತ್ರಿಕೂಟದ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ರಾಹುಲ್ ಗಾಂಧಿ ಮತ್ತು ಕೆ.ಸಿ ವೇಣುಗೋಪಾಲ್ ಸೇರಿ ಹಿರಿಯ ಕಾಂಗ್ರೆಸ್ ನಾಯಕರೂ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ತಮ್ಮ ಪಕ್ಷದ ನಾಯಕ ಟಿ.ಆರ್ ಬಾಲು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

“ಜೂನ್ 4 ಭಾರತದಲ್ಲಿ ಹೊಸ ಉದಯಕ್ಕೆ ನಾಂದಿಯಾಗಲಿದೆ. ಇಂದಿನ ಇಂಡಿಯ ಬ್ಲಾಕ್ ನಾಯಕರ ಸಭೆಯಲ್ಲಿ ಡಿಎಂಕೆಯನ್ನು ನಮ್ಮ ಪಕ್ಷದ ಖಜಾಂಚಿ ಮತ್ತು ಡಿಎಂಕೆ ಸಂಸದೀಯ ಪಕ್ಷದ ನಾಯಕ ಟಿಆರ್ ಬಾಲು ಅವರು ಪ್ರತಿನಿಧಿಸಲಿದ್ದಾರೆ” ಎಂದು ಎಂಕೆ ಸ್ಟಾಲಿನ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದು ಅನೌಪಚಾರಿಕ ಸಭೆಯಾಗಿದ್ದು, ಮತ ಎಣಿಕೆಯ ದಿನದಂದು ಯಾವ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಮತ್ತು ಇವಿಎಂಗಳ ಬಗ್ಗೆಯಾಗಲಿ ಅಥವಾ ನಮೂನೆ 17ಸಿ ಬಳಕೆಯಾಗಲಿ ಜನರು ಹೇಗೆ ಎಚ್ಚರದಿಂದಿರಬೇಕು ಎಂಬುದನ್ನು ಮಾತ್ರ ಚರ್ಚಿಸಲಾಗುವುದು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ವೈಯಕ್ತಿಕ ಕಾರಣಗಳಿಂದ ಸಭೆಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. “ನನ್ನ ತಾಯಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದರಿಂದ ನಾನು ಹೋಗದೇ ಇರಬಹುದು” ಎಂದು ಅವರು ಪಿಟಿಐಗೆ ತಿಳಿಸಿದರು.

ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿ ಲೋಕಸಭೆ ಚುನಾವಣೆಯ 7ನೇ ಮತ್ತು ಕೊನೆಯ ಹಂತದ ಮತದಾನ ಇಂದು ನಡೆಯುತ್ತಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮತ್ತು ಸೋಲಿಸಲು ಒಟ್ಟು 28 ವಿರೋಧ ಪಕ್ಷಗಳು ಇಂಡಿಯ ಹೆಸರಿನಲ್ಲಿ ಬೃಹತ್ ಒಕ್ಕೂಟವನ್ನು ರಚಿಸಿವೆ.


Share It

You cannot copy content of this page