ರಾಜಕೀಯ ಸುದ್ದಿ

ಲೋಕಸಭೆಯ ಕಳಪೆ ಪ್ರದರ್ಶನ: ಮತ್ತಷ್ಟು ಸಚಿವರ ತಲೆದಂಡ?

Share It

  • ತಮ್ಮ ಕ್ಷೇತ್ರಗಳಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲಾಗದ ಸಚಿವರು
  • ವರದಿ ನೀಡಲು ಪರಾಮರ್ಶಾ ಸಮಿತಿ ರಚಿಸಿದ ಕಾಂಗ್ರೆಸ್ ಹೈಕಮಾಂಡ್

ಬೆಂಗಳೂರು: ಕರ್ನಾಟಕದಲ್ಲಿ ನಿರೀಕ್ಷಿಸಿದಷ್ಟು ಸ್ಥಾನ ಗೆಲ್ಲಲಾಗದ ಕಾಂಗ್ರೆಸ್ ಸೋಲಿನ ಪರಾಮರ್ಶೆಗಾಗಿ ಸಮಿತಿ ರಚನೆ ಮಾಡಿದೆ. ಇದು ಒಂದಷ್ಟು ಸಚಿವರ ತಲೆದಂಡಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ರಾಜ್ಯದಲ್ಲಿ 20 ಸ್ಥಾನ ಗೆಲ್ಲುತ್ತೇವೆ ಎಂಬ ನಿರೀಕ್ಷೆಯನ್ನಿಟ್ಟುಕೊಂಡಿತ್ತು. ಸರಕಾರ ಮತ್ತು ಪಕ್ಷದ ಸಮೀಕ್ಷೆಗಳು ಕೂಡ 15 ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬಹುದು ಎಂಬ ವರದಿ ನೀಡಿತ್ತು. ಗುಪ್ತಚರ ವರದಿ ಪ್ರಕಾರವೂ ಕಾಂಗ್ರೆಸ್ 16-18 ಸ್ಥಾನ ಗೆಲ್ಲಲಿದೆ ಎಂಬ ಮಾಹಿತಿ ಇತ್ತು. ಇಷ್ಟೆಲ್ಲ ಇದ್ದರೂ, ಕಾಂಗ್ರೆಸ್ ಕೇವಲ 9 ಸ್ಥಾನಗಳನ್ನಷ್ಟೇ ಗೆದ್ದುಕೊಂಡಿದೆ.

ಅಧಿಕಾರದಲ್ಲಿರುವ ರಾಜ್ಯದಲ್ಲಿ ಕಾಂಗ್ರೆಸ್‌ನ ಇಷ್ಟು ದೊಡ್ಡ ಹಿನ್ನಡೆಯನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ, ಸೋಲಿನ ಬಗ್ಗೆ ಪರಾಮರ್ಶೆ ನಡೆಸಲು ಸಮಿತಿ ರಚಿಸಿದೆ. ಬಹುತೇಕ ಹಾಲಿ ಸಚಿವರ ಕ್ಷೇತ್ರಗಳು ಮತ್ತು ಉಸ್ತುವಾರಿ ಜಿಲ್ಲೆಗಳಲ್ಲಿಯೇ ಕಾಂಗ್ರೆಸ್‌ಗೆ ಬಹುದೊಡ್ಡ ಹಿನ್ನಡೆಯಾಗಿದೆ. ಇದಕ್ಕೆ ಇರುವ ಕಾರಣಗಳನ್ನು ಕಂಡುಹಿಡಿದು ವರದಿ ನೀಡುವಂತೆ ಸೂಚಿಸಲಾಗಿದೆ.

18 ಸಚಿವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾಗಿದೆ. ಅದೇ ರೀತಿ, ಉಸ್ತುವಾರಿ ವಹಿಸಿದ್ದ ಜಿಲ್ಲೆಗಳಲ್ಲಿಯೂ ಪಕ್ಷದ ಪ್ರದರ್ಶನ ಅಷ್ಟೊಂದು ಚೆನ್ನಾಗಿಲ್ಲ. ಹೀಗಾಗಿ, ಆರಾಮವಾಗಿದ್ದ ಆ ಎಲ್ಲ ಸಚಿವರಿಗೆ ತಲೆದಂಡದ ಭೀತಿ ಕಾಡುತ್ತಿದೆ. ಕಾಂಗ್ರೆಸ್ ಗ್ಯಾರಂಟಿಗಳನ್ನು ಜನ ಮೆಚ್ಚಿಕೊಂಡಿದ್ದರೂ ಕೂಡ, ಕ್ಷೇತ್ರದಲ್ಲಿ ಪಕ್ಷಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗದ ಸಚಿವರ ಬಗ್ಗೆ ಸಹಜವಾಗಿಯೇ ಪಕ್ಷದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಹೀಗಾಗಿ, ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಲಾಗದ ಸಚಿವರನ್ನು ಕೈಬಿಟ್ಟು, ಹೊಸಬರಿಗೆ ಅವಕಾಶ ಮಾಡಿಕೊಟುವ ನಿಟ್ಟಿನಲ್ಲಿ ಪಕ್ಷ ಯಾಕೆ ಯೋಚನೆ ಮಾಡಬಾರದು ಎಂಬ ಚರ್ಚೆ ಆರಂಭವಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಸಂಪೂರ್ಣ ಪ್ರಾಬಲ್ಯ ತೋರಿದ್ದು, ಶರಣ್ ಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ ಸ್ಥಾನಭದ್ರವಾದಂತಾಗಿದೆ. ಚಿಕ್ಕೋಡಿಯಲ್ಲಿ ಮಗಳನ್ನು ಗೆಲ್ಲಿಸಿಕೊಂಡ ಸತೀಶ್ ಜಾರಕಿಹೊಳಿ ಸಹಜವಾಗಿಯೇ ಸೇಫ್ ಆಗಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್, ಈ ಕಡೆ ಮಗನ ಗೆಲುವು ಸಾಧ್ಯವಾಗಲಿಲ್ಲ ಮತ್ತು ತಮ್ಮ ಉಸ್ತುವಾರಿ ಜಿಲ್ಲೆಯನ್ನು ಗೆಲ್ಲಲಿಲ್ಲ. ಹೀಗಾಗಿ, ಅವರ ಭವಿಷ್ಯವೂ ಕೂಡ ವರದಿಯಲ್ಲಿ ಉಲ್ಲೇಖವಾಗುವ ಸಾಧ್ಯತೆಯಿದೆ.

ಹಳೇ ಮೈಸೂರು ಭಾಗದ ಸಚಿವರಿಗೆ ಢವಢವ: ಕಾಂಗ್ರೆಸ್ ಅತ್ಯಂತ ಕಳಪೆ ಪ್ರದರ್ಶನ ತೋರಿರುವುದು ಹಳೇ ಮೈಸೂರು ಮತ್ತು ಬೆಂಗಳೂರು ನಗರ ಭಾಗದಲ್ಲಿ. ಬೆಂಗಳೂರು ನಗರದಲ್ಲಿ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಜಮೀರ್ ಅಹಮದ್, ರಾಮಲಿಂಗಾ ರೆಡ್ಡಿ ಸೇರಿ ನಾಲ್ವರು ಸಚಿವರಿದ್ದಾರೆ. ಆದರೆ, ಬೆಂಗಳೂರಿನ ನಾಲ್ಕು ಕ್ಷೇತ್ರಗಳನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಉಸ್ತುವಾರಿ ಹಾಗೂ ತಾವು ಪ್ರತಿನಿಧಿಸುವ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಉಳಿದಂತೆ ಮಂಡ್ಯದಲ್ಲಿ ಚಲುವರಾಯಸ್ವಾಮಿ, ತುಮಕೂರಿನಲ್ಲಿ ಕೆ.ಎನ್ ರಾಜಣ್ಣ, ಡಾ.ಜಿ ಪರಮೇಶ್ವರ್, ಬೆಂಗಳೂರು ಗ್ರಾಮಾಂತರದ ಮುನಿಯಪ್ಪ, ಚಿಕ್ಕಬಳ್ಳಾಪುರದಲ್ಲಿ ಎಂ.ಸಿ.ಸುಧಾಕರ್ ಮೇಲೆ ತೂಗುಗತ್ತಿ ತೂಗುತ್ತಿದೆ. ಮೈಸೂರು ಭಾಗದಲ್ಲಿ ಚಾಮರಾಜನಗರ ಉಸ್ತುವಾರಿ ವೆಂಕಟೇಶ್ ಮತ್ತು ತಮ್ಮ ಪುತ್ರನ ಗೆಲ್ಲಿಸಿಕೊಂಡ ಮಹದೇವಪ್ಪ ಸಧ್ಯಕ್ಕೆ ಸೇಪ್ ಎನ್ನಲಾಗುತ್ತಿದೆ.

ಮಲ್ಲಿಕಾರ್ಜುನ ಖರ್ಗೆ ಮುಂದೆ ವರದಿ: ರಾಜ್ಯದಲ್ಲಿ ಕಾಂಗ್ರೆಸ್ 9 ಸ್ಥಾನ ಗೆಲ್ಲಲು ಪ್ರಮುಖವಾದ ಕೊಡುಗೆ ಮಲ್ಲಿಕಾರ್ಜುನ ಖರ್ಗೆ ಅವರದ್ದು. ಕಾರಣ ಕಲ್ಯಾಣ ಕರ್ನಾಟಕದ 6 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಡಿಸಿದ್ದ ಖರ್ಗೆ ಅವರಿಗೆ ಅಲ್ಲಿನ ಜನ ಕೊಡುಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಜತೆಗೆ, ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗಬಹುದು ಎಂಬ ಆಶಯ ಆ ಭಾಗದ ಜನರು ಕಾಂಗ್ರೆಸ್ ಗೆಲ್ಲಿಸಲು ಕಾರಣವಾಗಿದೆ. ಹೀಗಾಗಿ, ಕಲ್ಯಾಣ ಕರ್ನಾಟಕದ ಬಹುತೇಕ ಗೆಲುವಿನ ಶ್ರೇಯ ಮಲ್ಲಿಕಾರ್ಜುನ ಖರ್ಗೆ ಅವರದ್ದು.ಇದಕ್ಕೆ ಹೋಲಿಕೆ ಮಾಡಿದರೆ, ಉಳಿದ ಭಾಗದ ಕೊಡುಗೆ ಶೂನ್ಯ. ಹೀಗಾಗಿ, ಈ ಎಲ್ಲ ಭಾಗದಲ್ಲಿ ಸೋಲಿನ ಪರಾಮರ್ಶೆ ನಡೆಸುವ ಸಮಿತಿ, ವರದಿಯನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಲು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ. ವರದಿ ಆಧರಿಸಿ ಯಾರ ಭವಿಷ್ಯ ಏನಾಗಲಿದೆ ಎಂದು ನಿರ್ಧಾರವಾಗಲಿದೆ.


Share It

You cannot copy content of this page