ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರು ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಮಾಡಿದ ನಂತರ ನ್ಯಾಯಾಲಯ ಅವರನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು. ಭಾನುವಾರಕ್ಕೆ ಆ ಅವಧಿ ಮುಗಿಯಲಿದ್ದು, ಒಂದು ದಿನ ಮುನ್ನವೇ ನ್ಯಾಯಾಲಯದ ಮುಂದೆ ಹಾಜರು ಮಾಡಲು ಪೊಲೀಸರು ಸಜ್ಜಾಗಿದ್ದಾರೆ. ರಜಾದಿನವಾದ ಕಾರಣ ಒಂದು ದಿನವೇ ನ್ಯಾಯಾಲಯಕ್ಕೆ ಹಾಜರುಪಡಿಸಲು ತೀರ್ಮಾನಿಸಿದ್ದು, ದರ್ಶನ್ ಇಂದೇ ಜೈಲು ಸೇರುವ ಸಾಧ್ಯತೆ ಇದೆ.
ಪೊಲೀಸರು ಬಹುತೇಕ ಮಹಜರು ಪ್ರಕ್ರಿಯೆ ಮತ್ತು ವಿಚಾರಣೆ ಮುಗಿಸಿದ್ದಾರೆ. ಹೀಗಾಗಿ, ಮತ್ತೇ ಕಸ್ಟಡಿಗೆ ಕೇಳುವ ಸಾಧ್ಯತೆ ಬಹಳ ಕಡಿಮೆ. ಆದ್ದರಿಂದ ದರ್ಶನ್ ಮತ್ತು ಸಹಚರರನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಹೆಚ್ಚು. ಹೀಗಾಗಿ, ಇಂದು ದರ್ಶನ್ ಜೈಲು ಸೇರುವ ಸಾಧ್ಯತೆ ಹೆಚ್ಚಾಗಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಸಾಕ್ಷ್ಯಗಳು ದರ್ಶನ್ ನೇರವಾಗಿ ಕೊಲೆಯಲ್ಲಿ ಭಾಗವಹಿಸಿರುವ ಕುರಿತು ಸಾಕ್ಷ್ಯ ನುಡಿಯುತ್ತಿವೆ. ಜತೆಗೆ ಆರೋಪಿಗಳು ಕೂಡ ದರ್ಶನ್ ಕೂಡ ಹಲ್ಲೆ ಮಾಡಿದ ಬಗ್ಗೆ ಮಾಹಿತಿ ನೀಡಿದ್ದರು. ಹೀಗಾಗಿ, ದರ್ಶನ್ ಈ ಪ್ರಕರಣದಲ್ಲಿ ಬಹುತೇಕ ಸಿಲುಕಿಕೊಂಡಿದ್ದಾರೆ.

