ಪಾಟ್ನಾ: ಮೀಸಲಾತಿ ಹೆಚ್ಚಳ ಮಾಡಿದ್ದ ಬಿಹಾರ ಸರಕಾರಕ್ಕೆ ಹೈಕೋರ್ಟ್ ಆದೇಶದಿಂದ ಹಿನ್ನಡೆಯಾಗಿದ್ದು, ಮೀಸಲಾತಿ ಹೆಚ್ಚಳದ ಮಹತ್ವಾಕಾಂಕ್ಷಿಯ ತೀರ್ಮಾನಕ್ಕೆ ಹಿನ್ನಡೆಯಾಗಿದೆ.
ಬಿಹಾರ ಸರಕಾರ ಎಸ್‌ಸಿ, ಎಸ್‌ಟಿ ಸೇರಿ ವಿವಿಧ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಜನಸಂಖ್ಯೆ ಆಧಾರದಲ್ಲಿ ಹೆಚ್ಚಳ ಮಾಡಿತ್ತು. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಹೆಚ್ಚಳಕ್ಕೆ ರಾಜ್ಯ ಸರಕಾರಕ್ಕೆ ಅವಕಾಶವಿಲ್ಲವಾದರೂ, ತನ್ನ ಉಭಯ ಸದನಗಳಲ್ಲಿ ಮೀಸಲಾತಿ ಹೆಚ್ಚಳದ ವಿಧೇಯಕ ಅನುಮೋದನೆ ಮಾಡಿಕೊಂಡಿತ್ತು.
ಇದೀಗ ಬಿಹಾರ ಹೈಕೋರ್ಟ್, ಬಿಹಾರ ಸರಕಾರದ ತೀರ್ಮಾನಕ್ಕೆ ತಪರಾಕಿ ನೀಡಿದ್ದು, ರಾಜ್ಯ ಸರಕಾರಗಳು ಮೀಸಲಾತಿ ಹೆಚ್ಚಳ ಮಾಡುವ ಅಧಿಕಾರವನ್ನು ಹೊಂದಿಲ್ಲ. ಸುಪ್ರೀಂ ಕೋರ್ಟ್ನ ತೀರ್ಪಿನಂತೆ ಯಾವುದೇ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ. 50 ರಷ್ಟನ್ನು ಮೀರಬಾರದು. ಹೀಗಾಗಿ, ಸರಕಾರದ ತೀರ್ಮಾನ ರದ್ದಾಗಬೇಕು ಎಂದು ಅದೇಶಿಸಿದೆ.
ಬಿಹಾರ ಸರಕಾರ ಮೀಸಲಾತಿ ಪ್ರಮಾಣವನ್ನು ಒಟ್ಟಾರೆ ಶೇ 50 ರಿಂದ 65 ಕ್ಕೆ ಹೆಚ್ಚಳ ಮಾಡಿತ್ತು. ರಾಜ್ಯದಲ್ಲಿ ನಡೆದಿದ್ದ ಜಾತಿ ಗಣತಿ ಆಧಾರದ ಮೇಲೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಪ್ರಯತ್ನವನ್ನು ಬಿಹಾರ ಸರಕಾರ ಮಾಡಿತ್ತು. ಆದರೆ, ಮೀಸಲಾತಿ ಹೆಚ್ಚಳವನ್ನು ಹೈಕೋರ್ಟ್ ರದ್ದು ಮಾಡಿದೆ. ಈ ನಡುವೆ ವಿಪಕ್ಷಗಳು ಸರಕಾರದ ನಡೆಯನ್ನು ಟೀಕಿಸಿದ್ದಾರೆ.
ಮೀಸಲಾತಿ ಹೆಚ್ಚಳ ಮಾಡಲೇಬೇಕು ಎಂಬ ಆಶಯ ಸರಕಾರಕ್ಕಿದ್ದರೆ, ಕೇಂದ್ರದಲ್ಲಿ ತನ್ನದೇ ಮೈತ್ರಿ ಸರಕಾರ ಆಡಳಿತದಲ್ಲಿದೆ. ಲೋಕಸಭೆಯಲ್ಲಿ ವಿಧೇಯಕ ಮಂಡನೆ ಮಾಡಿ, ಅದಕ್ಕೆ ತಿದ್ದುಪಡಿ ತಂದು, ಮೀಸಲಾತಿ ಪ್ರಮಾಣ ಹೆಚ್ಚಿಸುವ ಕೆಲಸ ಮಾಡಬೇಕಿತ್ತು. ಆದರೆ, ಕಣ್ಣೊರೆಸುವ ತಂತ್ರದ ಭಾಗವಾಗಿ ಮೀಸಲಾತಿ ಹೆಚ್ಚಿಸಿ, ಇದೀಗ ಹೈಕೋರ್ಟ್ ಮುಂದೆ ನಗೆಪಾಟಲಿಗೀಡಾಗಿದೆ ಎಂದು ಟೀಕಿಸಿವೆ.
ಭಾರತೀಯ ಸಂವಿಧಾನದ 15 ಮತ್ತು 16 ರ ಪ್ರಕಾರ ಜಾಟ್, ಮರಾಠ ಮತ್ತು ಮುಸ್ಲಿಮರಂತಹ ನಿರ್ದಿಷ್ಟ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸುವ ಸಲುವಾಗಿ ಅನೇಕ ರಾಜ್ಯ ಸರಕಾರಗಳು ಶೇ. 50 ರಷ್ಟು ಮಿತಿಯನ್ನು ಮೀರಿ ಮೀಸಲಾತಿ ಹೆಚ್ಚಿಸಲು ತೀರ್ಮಾನಿಸಿದ್ದವು. ಆದರೆ, ಈ ಎಲ್ಲ ಸರಕಾರಗಳಿಗೂ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಕಳೆದ ವರ್ಷ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯಿದೆ 2020 ಅನ್ನು ರದ್ದುಗೊಳಿಸಿತು, ಇದು ರಾಜ್ಯದ ನಿವಾಸಿಗಳಿಗೆ ಹರಿಯಾಣ ಉದ್ಯಮಗಳಲ್ಲಿ 75 ಪ್ರತಿಶತ ಮೀಸಲಾತಿ ಒದಗಿಸಲು ತೆಗೆದುಕೊಂಡಿದ್ದ ತೀರ್ಮಾನವಾಗಿತ್ತು.
ಸುಪ್ರೀಂ ತೀರ್ಪು ಏನು ಹೇಳುತ್ತದೆ: ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಶೇ. 50 ಕ್ಕಿಂತ ಹೆಚ್ಚಿನ ಮೀಸಲಾತಿ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ. 1992 ರ ಇಂದ್ರ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಮೀಸಲಾತಿ ಶೇ. 50 ಅನ್ನು ಮೀರಬಾರದು ಎಂದು ಹೇಳಿದೆ. 2021 ರಲ್ಲಿ, ಐದು ನ್ಯಾಯಾಧೀಶರ ಸಂವಿಧಾನ ಪೀಠವು ಈ 1992 ರ ತೀರ್ಪನ್ನು ಮರುಪರಿಶೀಲಿಸಲು ನಿರಾಕರಿಸಿತು. ಮೀಸಲಾತಿ ಶೇ. 50 ರ ಮಿತಿ ಮೀರಿದರೆ ಜಾತಿ ಆಳ್ವಿಕೆಗೆ ಕಾರಣವಾಗುತ್ತದೆ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ಟೀಕಿಸಿದ್ದರು.

