ಅಪರಾಧ ರಾಜಕೀಯ ಸುದ್ದಿ

ಜೆಡಿಎಸ್ ಎಂಎಲ್ಸಿ ಡಾ.ಸೂರಜ್ ರೇವಣ್ಣ ವಿರುದ್ಧ ಮತ್ತೊಂದು ಎಫ್ಐಆರ್!

Share It

ಹಾಸನ: ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಮತ್ತೊಂದು ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಅಡಿಯಲ್ಲಿ ಎಸ್ಐಆರ್ ದಾಖಲಾಗಿದೆ.

ಕೊರೊನ ಸಮಯದಲ್ಲಿ ತನ್ನ ಮೇಲೆ ಕೂಡ ಇದೇ ರೀತಿಯ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮತ್ತೋರ್ವ ಸಂತ್ರಸ್ತ ದೂರು ನೀಡಿದ್ದಾನೆ, ಈ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲೇ ಸೂರಜ್ ವಿರುದ್ಧ ಐಪಿಸಿ ಸೆಕ್ಷೆನ್ 377, 342, 506ರ ಅಡಿ ಎಫ್ಐಆರ್ ದಾಖಲಾಗಿದೆ.

ಅಚ್ಚರಿ ಅಂದರೆ ಹಿಂದೆ ಮೊದಲ ಕೇಸ್​ನ ಸಂತ್ರಸ್ತನ ವಿರುದ್ಧವೇ ದೂರು ನೀಡಿದ್ದವ ಇದೀಗ ಸೂರಜ್​ ವಿರುದ್ಧ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ.

3 ವರ್ಷಗಳ ಹಿಂದೆ ತನ್ನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಂದು ಆರೋಪಿಸಿ ಸೂರಜ್ ರೇವಣ್ಣ ಆಪ್ತನಾಗಿದ್ದ ಹೊಳೆನರಸೀಪುರ ತಾಲ್ಲೂಕು ಮೂಲದ ಯುವಕ ದೂರು ನೀಡಿದ್ದಾನೆ, ಈ ಮೂಲಕ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲೇ ಸೂರಜ್ ವಿರುದ್ಧ 2ನೇ ಕೇಸ್ ದಾಖಲಾದಂತಾಗಿದೆ.

ಇದೇ 2ನೇ ಕೇಸ್​ನ ಸಂತ್ರಸ್ತ ಜೂನ್ 21 ರಂದು ಡಾ. ಸೂರಜ್ ಅವರನ್ನ ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದು ಮೊದಲ ಪ್ರಕರಣದ ಸಂತ್ರಸ್ತನ ವಿರುದ್ಧ ದೂರು ನೀಡಿದ್ದ. ಆದ್ರೆ, ಇದೀಗ ಆಪ್ತ ಉಲ್ಟಾ ಹೊಡೆದು ಸೂರಜ್ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.

ಅಲ್ಲದೇ ಅರಕಲಗೂಡು ಮೂಲದ ಯುವಕನ (ಮೊದಲ ಪ್ರಕರಣದ ಸಂತ್ರಸ್ತ) ವಿರುದ್ಧ ದೂರು ನೀಡಲು ಸೂರಜ್ ಒತ್ತಡ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ಸೂರಜ್​ ಮತ್ತೊಂದು ಕಂಟಕ ಎದುರಾಗಿದೆ.

ಸಿಐಡಿ ಕಸ್ಟಡಿಯಲ್ಲಿ ಸೂರಜ್: ಸಲಿಂಗ ಕಾಮ ಪ್ರಕರಣದಲ್ಲಿ ಸಿಕ್ಕಿಬಿದ್ದು ನ್ಯಾಯಾಂಗ ಬಂಧನದಲ್ಲಿದ್ದ ಎಂಎಲ್‌ಸಿ ಸೂರಜ್‌ ರೇವಣ್ಣನನ್ನು 8 ದಿನ ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್​ ಬುಧವಾರ ಆದೇಶ ಹೊರಡಿತ್ತು. ಪ್ರಕರಣ ವಿಚಾರಣೆ ನಡೆಸಿದ 42ನೇ ಎಸಿಎಂಎಂ ಕೋರ್ಟ್‌ ನ್ಯಾಯಾಧೀಶರಾದ ಕೆ.ಎನ್‌.ಶಿವಕುಮಾರ್‌ ಅವರು ಸೂರಜ್‌ನನ್ನು ಜುಲೈ 1ರವರೆಗೆ ಸಿಐಡಿ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ. ಹೀಗಾಗಿ ಸಿಐಡಿ ಅಧಿಕಾರಿಗಳು ನಿನ್ನೆ (ಜೂನ್​ 24) ಪರಪ್ಪನ ಅಗ್ರಹಾರ ಜೈಲಿನಿಂದ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ. ಜುಲೈ 1 ರವರೆಗೆ ಸೂರಜ್ ರೇವಣ್ಣ ಸಿಐಡಿ ಕಸ್ಟಡಿಯಲ್ಲಿ ಇರಲಿದ್ದಾರೆ.


Share It

You cannot copy content of this page