ರಾಜಕೀಯ ಸುದ್ದಿ

ಚನ್ನಪಟ್ಟಣ ಬೈ ಎಲೆಕ್ಷನ್: ಮೈತ್ರಿಯಿಂದ ಟಿಕೆಟ್‌ ಫೈಟ್‌, ದಿಲ್ಲಿಯಲ್ಲೇ ಕುಳಿತ ಯೋಗೇಶ್ವರ್.

Share It

ನವದೆಹಲಿ : ಚುನಾವಣೆ ಘೋಷಣೆಗೂ ಮುನ್ನವೇ ಚನ್ನಪಟ್ಟಣ ಅಖಾಡ ರಂಗೇರುತ್ತಿದೆ. ಈಗಾಗಲೇ ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಚನ್ನಪಟ್ಟಣ ಅಖಾಡಕ್ಕೆ ಧುಮುಕಿದ್ದಾರೆ.

ಇತ್ತ ದೋಸ್ತಿ ಪಕ್ಷಗಳಾದ ​ ಬಿಜೆಪಿ-ಜೆಡಿಎಸ್ ನಡುವೆ ಟಿಕೆಟ್‌ಗಾಗಿ ಫೈಟ್ ಶುರುವಾಗಿದೆ. ಜೆಡಿಎಸ್​ ಅಭ್ಯರ್ಥಿಯನ್ನು ಕಣಕ್ಕಿಸಬೇಕಾ ಅಥವಾ ಬಿಜೆಪಿ ಕ್ಯಾಂಡಿಡೇಟ್ ಹಾಕಬೇಕಾ ಎನ್ನುವ ಚರ್ಚೆಗಳು ನಡೆದಿವೆ. ಹೀಗಾಗಿ ಟಿಕೆಟ್ ಆಕಾಂಕ್ಷಿಯಾಗಿರುವ ಸಿಪಿ ಯೋಗೇಶ್ವರ್​ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ಆದ್ರೆ, ಇನ್ನೂ ಬೈ ಎಲೆಕ್ಷನ್​ಗೆ ದಿನಾಂಕ ಘೋಷಣೆ ಮಾಡಿಲ್ಲ. ಆಗಲೇ ಕ್ಷೇತ್ರದಲ್ಲಿ ರಾಜಕೀಯ ರಂಗೇರಿದೆ. ಅದರಲ್ಲೂ ದೋಸ್ತಿಗಳಾದ ಜೆಡಿಎಸ್ ಮತ್ತು ಬಿಜೆಪಿ ನಡುವೆ ಟಿಕೆಟ್​ ಫೈಟ್​ ಜೋರಾಗಿದೆ.

ಹೀಗಾಗಿ ಟಿಕೆಟ್ ಆಕಾಂಕ್ಷಿಯಾಗಿರುವ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್​ ದೆಹಲಿಗೆ ತೆರಳಿದ್ದು, ಟಿಕೆಟ್​ಗಾಗಿ ಕಸರತ್ತು ನಡೆಸಿದ್ದಾರೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿಪಿ ಯೋಗೇಶ್ವರ್, ಸ್ಪರ್ಧೆ ಬಗ್ಗೆ ಬಹುಪಾಲು ನಿರ್ಣಯ ಕುಮಾರಸ್ವಾಮಿ ಮಾಡುತ್ತಾರೆ. ಕುಮಾರಸ್ವಾಮಿ ಆಶೀರ್ವಾದ ಇಲ್ಲದೆ ಏನು ಆಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೆಹಲಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ಎಂಎಲ್​ಸಿ, ಸಿ.ಪಿ.ಯೋಗೇಶ್ವರ್, ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿ ಎಂದು ಯಾರೂ ಕೇಳಿಲ್ಲ. ಪಕ್ಷದಿಂದ ಟಿಕೆಟ್ ಸಿಗದೆ ಇದ್ದರೂ ಎನ್​ಡಿಎಗೆ ನನ್ನ ಬೆಂಬಲವಿದೆ. ನಮ್ಮ ಪಕ್ಷದ ವರಿಷ್ಠರು ಏನು ಹೇಳುತ್ತಾರೋ ಅದನ್ನು ಕೇಳುತ್ತೇನೆ. ನಿಖಿಲ್ ಸ್ಪರ್ಧೆ ಮಾಡೋದಾದ್ರೆ ನನ್ನ ಸಂಪೂರ್ಣ ಬೆಂಬಲ ಇದೆ. ನಾನು ಯಾವುದೇ ಒಳಸಂಚು ಮಾಡಲ್ಲ, ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಮಂಜುನಾಥ್ ಗುಡಿಹಳ್ಳಿ


Share It

You cannot copy content of this page