ಬೆಂಗಳೂರು; ರಾಜ್ಯ ರಾಜಕೀಯದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಒಂದೆಡೆ ಚರ್ಚೆಗೆ ಗ್ರಾಸವಾಗಿದ್ದರೆ, ಇದೀಗ ಸಿಎಂ ಹುದ್ದೆ ವಿಚಾರದ ಚರ್ಚೆಯೇ ಮತ್ತೆ ಮುನ್ನೆಲೆಗೆ ಬರುವ ಸುಳಿವು ದೊರೆತಿದೆ.
ಇದಕ್ಕೆ ಕಾರಣ, ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಒಕ್ಕಲಿಗ ಸ್ವಾಮೀಜಿಯೊಬ್ಬರು ಸಿಎಂ ಸಿದ್ದರಾಮಯ್ಯಗೆ ಮಾಡಿದ ಮನವಿ. ಆ ಕುರಿತ ವಿವರ ಇಲ್ಲಿದೆ.
ಈ ಅಪರೂಪದ ವಿದ್ಯಮಾನಕ್ಕೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಗುರುವಾರ ಸಾಕ್ಷಿಯಾಯಿತು. ಸಮಾರಂಭದಲ್ಲಿ ಭಾಗವಹಿಸಿದ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರಶ್ರೀ ವೇದಿಕೆ ಮೇಲೆಯೇ ಸಿಎಂ ಸಿದ್ದರಾಮಯ್ಯರನ್ನು ಉದ್ದೇಶಿಸಿ, ನಿಮಗೆ ಅನುಭವ ಇದೆ, ಈಗ ಡಿ.ಕೆ.ಶಿವಕುಮಾರ್ಗೆ ಅವಕಾಶ ಮಾಡಿಕೊಡಿ ಎಂದರು.
ಸಿದ್ದರಾಮಯ್ಯನವರು ಮನಸ್ಸು ಮಾಡಿದರೆ ಮಾತ್ರ ಇದು ಸಾಧ್ಯ. ಹಾಗಾಗಿ ಸಿಎಂ ಸ್ಥಾನ ಡಿಕೆ ಶಿವಕುಮಾರ್ಗೆ ಅವರು ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಚಂದ್ರಶೇಖರ
ಶ್ರೀಗಳು ಮನವಿ ಮಾಡಿದರು.
ಸಿದ್ದರಾಮಯ್ಯ ಸುಮ್ಮನೆ ಇದ್ದು ಅಧಿಕಾರಕ್ಕೆ ಬಂದರು, ಮಾತು ಮುಂದುವರೆಸಿದ ಚಂದ್ರಶೇಖರ ಸ್ವಾಮೀಜಿ, ಡಿ.ಕೆ ಶಿವಕುಮಾರ್ ಸಿಎಂ ಆಗಬೇಕಾಗಿರುವುದು ಧರ್ಮ. ಅವರು ಹಣ ಖರ್ಚು ಮಾಡಿದ್ದಾರೆ, ಹೋರಾಟ ಮಾಡಿದ್ದಾರೆ. ಸಿದ್ದರಾಮಯ್ಯರು ಸುಮ್ಮನೆ ಇದ್ದು ಅಧಿಕಾರಕ್ಕೆ ಬಂದರು ಎಂದು ಹೇಳಿದರು. ಸಿದ್ದರಾಮಯ್ಯ ಬಿಟ್ಟರೆ ಡಿ.ಕೆ ಶಿವಕುಮಾರ್ಗೆ ಸಿಎಂ ಆಗುವ ಅರ್ಹತೆ ಇದೆ ಎಂದೂ ಅವರು ಹೇಳಿದರು.
ಸಿದ್ದರಾಮಯ್ಯ ಹೇಳಿದ್ದೇನು?
ಡಿ.ಕೆ ಶಿವಕುಮಾರ್ಗೆ ಸಿಎಂ ಸ್ಥಾನ ಕೊಡಬೇಕೆಂಬ ಶ್ರೀಗಳ ಮನವಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಎಲ್ಲವನ್ನೂ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಲಿದೆ. ಹೈಕಮಾಂಡ್ ತೀರ್ಮಾನದಂತೆ ನಾವು ನಡೆದುಕೊಳ್ಳುತ್ತೇವೆ ಎಂದರು. ಇನ್ನು ಶ್ರೀಗಳ ಮನವಿ ಬಗ್ಗೆ ಪ್ರತಿಕ್ರಿಯೆ ನೀಡಲು ಡಿಸಿಎಂ ಡಿ.ಕೆ. ಶಿವಕುಮಾರ್ ನಿರಾಕರಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಇದೀಗ ಚಂದ್ರಶೇಖರಶ್ರೀ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ. ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಸ್ವಾಮೀಜಿ ಹೇಳಿಕೆ ಬಗ್ಗೆ ಚರ್ಚೆ ಆರಂಭವಾಗಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ವಿಚಾರವಾಗಿ ಚರ್ಚೆ ನಡೆಯುತ್ತಿದೆ.
ಇದಕ್ಕೆ ಫುಲ್ಸ್ಟಾಪ್ ಹಾಕಲು ಸಿಎಂ ಸಿದ್ದರಾಮಯ್ಯರ ಖುದ್ದು ಅಖಾಡಕ್ಕಿಳಿದು ಬಹಿರಂಗ ಹೇಳಿಕೆಗಳನ್ನು ನೀಡದಂತೆ ಸಚಿವರು, ಶಾಸಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ಚಂದ್ರಶೇಖರ ಸ್ವಾಮೀಜಿ ಸಿಎಂ ಸಿದ್ದರಾಮಯ್ಯಗೆ ಅಧಿಕಾರ ಬಿಟ್ಟುಕೊಡುವಂತೆ ಮನವಿ ಮಾಡಿದ ವಿದ್ಯಮಾನ ನಡೆಯಿತು.

