ಅಂಕಣ

ನಾಯಕನಿಗೆ ಚರಿತ್ರೆಯ ಅರಿವು ಮತ್ತು ಭವಿಷ್ಯದ ಕಲ್ಪನೆ ಇರಬೇಕು

Share It

“ಹಿಂದೆ ಗುರುವಿರಬೇಕು‌ ಮುಂದೆ ಗುರಿಯಿರಬೇಕು” ಎಂಬ ಮಾತಿನಂತೆ, ನಾಯಕನಾದವನಿಗೆ ಚರಿತ್ರೆಯ ಸಂಪೂರ್ಣ ಅರಿವಿರಬೇಕು, ಹಾಗೆಯೇ ಭವಿಷ್ಯದ ಬಗ್ಗೆ ಸ್ಪಷ್ಟವಾದ ಚಿಂತನೆ ಇರಬೇಕು, ಜೊತೆಗೆ ವಾಸ್ತವವನ್ನು ಸರಿಯಾಗಿ ಗ್ರಹಿಸುವ ಸೂಕ್ಷ್ಮತೆ ಇರಬೇಕು, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರದ ಭಾರತದಲ್ಲಿ ಇಂತಹ ಬಹಳಷ್ಟು ಜನ ನಾಯಕರಿದ್ದರು, ಪ್ರಸ್ತುತ ಇಂತ ನಾಯಕರನ್ನು ದೀಪ ಹಚ್ಚಿ ಹುಡುಕುವ ಪರಿಸ್ಥಿತಿಯಲ್ಲಿ ನಾವಿದ್ದೇವೆಂದರೆ ತಪ್ಪಾಗಲಿಕ್ಕಿಲ್ಲಾ,

ಅಂದು ರಾಜಕಾರಣವೆನ್ನುವದೊಂದು ಜನಸೇವೆಯಾಗಿತ್ತು, ಸೇವಾ ಮನೋಭಾವದವರು ಮಾತ್ರ ರಾಜಕಾರಣಕ್ಕೆ ಬರುತ್ತಿದ್ದರು ಆದರೆ ಹೀಗೆ ರಾಜಕಾರಣವೆನ್ನುವದು ಜನಸೇವೆಯಾಗಿ ಉಳಿಯದೆ ಅದು ಒಂದು ರೀತಿಯ ವ್ಯಾಪಾರವಾಗಿ ಬಿಟ್ಟಿದೆ, ಇಂದು ರಾಜಕಾರಣಕ್ಕೆ ಬರುವ ಬಹುತೇಕರಿಗೆ ನಮ್ಮ
ಇತಿಹಾಸವು ಗೊತ್ತಿಲ್ಲಾ, ಭವಿಷ್ಯದ ಚಿಂತನೆಯು ಇಲ್ಲ, ವಾಸ್ತವದ ಪರಿಸ್ಥಿತಿ ಅವಲೋಕನವು ಇಲ್ಲ, ಅವರಿಗೆ ಗೊತ್ತಿರೋದೆಂದರೆ ದುಡ್ಡು ಹೇಗೆ ಮಾಡಬೇಕು ಮತ್ತು
ನಾಯಕರನ್ನು ಹೇಗೆ ಮೆಚ್ಚಿಸಬೇಕೆನ್ನೋದು ಮಾತ್ರ ತುಂಬಾ ಚೆನ್ನಾಗಿ ಗೊತ್ತಿದೆ, ಅದಕ್ಕಾಗಿ ಅವರು ಸ್ವಾಭಿಮಾನವಿಲ್ಲದೆ
ಗುಲಾಮಿಗಿರಿ ಬೇಕಾದರು ಮಾಡುವರು,

ಸ್ವಂತ ಆಲೋಚನೆಗಳಂತೂ ಇಲ್ಲ ಮತ್ತು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯು ಇಲ್ಲ, ಯಾರದೊ ಕೈಗೊಂಬೆಯಾಗಿ ಕೆಲಸ ಮಾಡುವವರು ಇಂದು ನಾಯಕರುಗಳಾಗಿ ಉದ್ಭವಿಸುತ್ತಿರುವರೆ ಹೊರತು ನೈಜ್ಯವಾದ ಸಾಮಾಜಿಕ ಹೋರಾಟಗಳಿಂದ ದೂರವಿದ್ದುಕೊಂಡು ಅಥವಾ ಮಾಡಿದರೂ ಸಹ ಪ್ರಾಮಾಣಿಕ ಹೋರಾಟಗಳನ್ನು ಮಾಡದೆ ಹೊಂದಾಣಿಕೆ ಮಾಡಿಕೊಂಡು ಅಥವಾ ಇನ್ಯಾವುದೊ ಒಂದು ರೀತಿಯಲ್ಲಿ ದೇಶದ ಕಾನೂನನ್ನು ಮುರಿದು ನೈಸರ್ಗಿಕ ಸಂಪತ್ತನ್ನು ಲೂಟಿಮಾಡಿ ಇಲ್ಲವೆ, ಜನಸಾಮಾನ್ಯರನ್ನು ಮೋಸಗೊಳಿಸಿ ಗಳಿಸಿ ಸಂಪಾದಿಸಿದ ಬಿಟ್ಟಿ ದುಡ್ಡಿನ ಒಂದಾಣೆಯನ್ನು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿ ಅದರಿಂದ ಜನರ ಮನಸ್ಸನ್ನು ಗೆಲ್ಲುವ ಮಹಾನಾಟಕ ಮಾಡುವ ಮೂಲಕ ಮಾತ್ರದಾರಿಯಾಗಿ ರಾಜಕಾರಣಕ್ಕೆ ಬಂದವರ ಸಂಖ್ಯೆ ಮತ್ತು ಯಾರದೋ ನಾಮ ಬಲದಿಂದ ಇಲ್ಲವೇ ಇನ್ಯಾವುದೋ ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ರಾಜಕಾರಣಕ್ಕೆ ಬಂದು, ರಾಜಕೀಯ ಅಧಿಕಾರವನ್ನು ಪಡೆದವರೇ ಇಂದು ರಾಜಕಾರಣದಲ್ಲಿ ಹೆಚ್ಚಾಗಿದ್ದಾರೆ, ಇಂತಹ ನಾಯಕರಿಂದ ಜನಸಾಮಾನ್ಯರ ಅಭಿವೃದ್ಧಿಯನ್ನು ನಿರೀಕ್ಷಿಸುವುದು ಸಾಧ್ಯವೆ? ಇಂತವರು ಜನಪ್ರಿಯ ನಾಯಕರಾದರು ಸಹ ಜನರ ನೋವಿಗೆ ಸ್ಪಂದಿಸುವ ಸಹೃದಯಿ ನಾಯಕನಾಗುವದ ಅಸಾಧ್ಯವೇ

ಸಾವಿರಾರು ವರ್ಷಗಳ ಬಹುತ್ವದ ಪ್ರಬುದ್ಧ ಚರಿತ್ರೆಯನ್ನೊಂದಿರುವ ನಮ್ಮ ದೇಶದ ನೆಲ-ಜಲ ಮೂಲದ ತಾಯಿ ಹೃದಯಿ ಸಂಸ್ಕೃತಿಯ ಜಾತ್ಯಾತೀತ ಪ್ರಜಾತಂತ್ರ ರಾಷ್ಟ್ರವನ್ನು ಸುಭದ್ರವಾಗಿ ಕಾಪಾಡಿಕೊಂಡು ಜಗತ್ತಿಗೆ ಮಾದರಿಯಾದ ನಮ್ಮ ಸುಂದರ ಪ್ರಜಾಪ್ರಭುತ್ವವನ್ನೇ ಉಳಿಸಿಕೊಳ್ಲುವರೊ‌ ದೇವರೆ ಬಲ್ಲ, “ಯಥಾ ರಾಜ ತಥಾ ಪ್ರಜೆಗಳೆನ್ನುವಂತೆ” ಪ್ರಜಗಳು ಪ್ರಜಾಪ್ರತಿನಿಧಿಗಳ ಜಾಡನ್ನಿಡಿದು ಹೊರಟಿದ್ದಾರೆ, ಪ್ರಜಾ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಚುನಾವಣೆಗಳಲ್ಲಿ ಬಹುತೇಕ ನಮ್ಮ ಸುಶಿಕ್ಷಿತ ಮತದಾರರ ಮತಗಳನ್ನು ಚಲಾಯಿಸುವುದಿಲ್ಲ, ಒಂದು ವೇಳೆ ಚಲಾಯಿಸಿದರೂ ಜಾತಿ- ಧರ್ಮ-ಹಣ-ಹೆಂಡಗಳಿಲ್ಲದೇ ಸೂಕ್ತ ಅಭ್ಯರ್ಥಿಗಳಿಗೆ
ಚಲಾಯಿಸುವುದು ಅಪರೂಪವಾಗಿದೆ, ಹೀಗಾಗಿ ನಮ್ಮ ನಾಯಕರುಗಳು

ಸುಡುವಾಗ್ನಿ ಕೊಂಡದಂತೆ
ಉರಿದುರಿದು ಬೀಳುವರು,
ಕೋಮು ದಳ್ಳೂರಿಗಳಲ್ಲಿ
ಭ್ರಷ್ಟಾಚಾರದ ಕೂಪದಲ್ಲಿ,
ಅತ್ಯಾಚಾರದ ಆಗರದಲ್ಲಿ
ಮೌಢ್ಯ-ಕಂದಾಚಾರಗಳಲ್ಲಿ ಮುಳುಗಿ,
ಹಣಬಲ ತೊಳ್ಬಲದಲ್ಲಿ
ಪ್ರಜಾಪ್ರಭುತ್ವ ಸೋತು ಸೊರಗುತ್ತಿದೆಂದನು,
ನಮ್ಮ ರಸ್ತಾಪೂರದ ಭೀಮಕವಿಗಳು.

  ಜಾತಿ,ಧರ್ಮ,ದೇವರು,ಮಂದಿರ,ಮಸೀದಿ,ಗುಡಿ,ಚರ್ಚ್ ಮತ್ತು ಪ್ರತಿಮೆಗಳಲ್ಲಿ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಕೋಮು ಗಲಭೆಯ ಸೃಷ್ಟಿಸಿ ಅಧಿಕಾರ ಪಡೆಯಬೇಕೆನ್ನುವ ನಾಯಕರುಗಳ ಮಧ್ಯೆ ಇಂದು ಪ್ರಜಾಪ್ರಭುತ್ವದ ಹಬ್ಬ (ಚುನಾವಣೆ)ವನ್ನು ಪ್ರಜೆಗಳು  ಮತ ಚಲಾಯಿಸುವ ಮೂಲಕ ಆಚರಿಸಬೇಕಿದೆ, ಮತ ಚಲಾಯಿಸುವಾಗ ಪ್ರಜೆಗಳು ಬಹಳ ಎಚ್ಚರವಹಿಸಿ ಮತಚಲಾಯಿಸಬೇಕಾದ ಅನಿವಾರ್ಯತೆ ಇದೆ, ಹೀಗಾಗಿ ದೇಶದ ಮತದಾರ ಬಂಧುಗಳು

ನಾಗರಿಕ ಸಮಾಜವನ್ನು ಸುಭದ್ರವಾಗಿ ಕಟ್ಟಲು ಬಸವಾದಿ ಶಿವಶರಣ ಶರಣಿಯರಾಶೆಯಂತೆ, ಬುದ್ಧನ ಬೆಳಕಲ್ಲಿ ಬಾಬಾ ಸಾಹೇಬರ ಸಂವಿಧಾನದ ಮೂಲಕ ಸಮ ಸಮಾಜವನ್ನು ಕಟ್ಟುವ ಕನಸುಳ್ಳ ನಾಯಕರಿಗೆ ಮತ ಹಾಕಿ ಗೆಲ್ಲಿಸಬೇಕಾದ ಸಂದಿಗ್ದ ಪರಿಸ್ಥಿತಿ ದೇಶವಾಸಿಗರಾಗಿದೆ,
ಕಲ್ಯಾಣ ರಾಜ್ಯವನ್ನು ಕಟ್ಟಲು ಪ್ರಜಾಪ್ರಭುತ್ವ
ಗಟ್ಟಿಗೊಳ್ಳಿಸಲು, ದೇಶದ ಭವಿಷ್ಯವನ್ನು ರೂಪಿಸಲು ಸಂಸತ್ತಿನಲ್ಲಿ ಪ್ರಜಾಪ್ರತಿನಿಧಿಗಳು ಸಂವಿಧಾನತ್ಮಕವಾಗಿ ದೇಶದ ಒಳಿತಿಗೆ ಬೇಕಾದ ಕಾಯ್ದೆ-ಕಾನೂನುಗಳನ್ನು ರೂಪಿಸಿ ಕಾರ್ಯಾಂಗದ ಮೂಲಕ ಪ್ರಜೆಗಳಿಗೆ ತಲುಪಿಸಿ,
ಪ್ರಜೆಗಳ ಪ್ರಗತಿಯ ಮೂಲಕ ದೇಶದ ಪ್ರಗತಿಗಾಗಿ ಉತ್ತಮ ನಾಯಕರಿಗೆ ಮತ ಹಾಕಿ ಪ್ರತಿನಿಧಿಗಳಾಗಿ ಆಯ್ಕೆಮಾಡಿಕೊಳ್ಳುವ ಮತದಾನದ ಹಕ್ಕು ಮತ್ತು ಚುನಾವಣೆಯ ವ್ಯವಸ್ಥೆಯನ್ನು ಕೊಟ್ಟ ನಮ್ಮ ಸಂವಿಧಾನಕ್ಕೆ ಕೃತಜ್ಞರಾಗಿ, ಸಂವಿಧಾನವನ್ನು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತು ಜಾತ್ಯಾತೀತ ಸುಭದ್ರ, ಸಮೃದ್ಧ ಭಾರತವನ್ನು ಮತ್ತಷ್ಟು ಸುಭದ್ರ ಹಾಗೂ ಸಮೃದ್ಧವಾಗಿಸಲು ಕಡ್ಡಾಯವಾಗಿ ಎಲ್ಲರೂ ಮತಗಟ್ಟೆಗೆ ಹೋಗಿ ಸೂಕ್ತ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ಸಂವಿಧಾನ ರಕ್ಷಿಸಿ ಭವ್ಯ ಭಾರತವನ್ನು ಕಟ್ಟಬೇಕಿದೆ‌.
‌‌‌ಆ ಮೂಲಕ ನಮ್ಮ ಸಂವಿಧಾನವನ್ನು ಉಳಿಸಿಕೊಂಡು ಹಲವು ಜಾತಿ ಧರ್ಮಗಳು ಒಂದಾಗಿ ಬದುಕಿ ಬಾಳುವ ಬೀಡಾದ ನಮ್ಮ ಜಾತ್ಯಾತೀತ ರಾಷ್ಟವನ್ನು ರಾಷ್ಟ್ರ ಕವಿ ಕುವೆಂಪುರವರ “ಆ ಮತ ಈ ಮತವೆನ್ನದೆ, ಮನುಜಮತದ ಆದಿಯಿಡಿದು, ವಿಶ್ವಮತದೆಡೆಗೆ” ಸಾಗಿ ದೇಶವನ್ನು ಸರ್ವಜನಾಂಗಗಳ ಶಾಂತಿಯ ತೋಟವಾಗಿ ರೂಪಿಸಬೇಕಿದೆ, ಅದಕ್ಕಾಗಿ ಜಾತಿ-ಧರ್ಮ-ಹಣ-ಹೆಂಡಗಳ ಆಮಿಷಕ್ಕೆ ಒಳಗಾಗದೆ ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸೋಣ.

           - ಶ್ರೀಶೈಲ ಬಿರಾದಾರ             ನಾಗನಟಗಿ 9008659817

Share It

You cannot copy content of this page