ಮೈಸೂರು (ಏ.14): ನಿಮಗೆಲ್ಲ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ಮೋದಿ, ಚೈತ್ರ ನವರಾತ್ರಿಯಂದು ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿದೆ. ತಾಯಿ ಚಾಮುಂಡೇಶ್ವರಿ, ತಾಯಿ ಭುವನೇಶ್ವರಿ ಹಾಗೂ ತಾಯಿ ಕಾವೇರಿಯ ಪಾದಗಳಿಗೆ ಪ್ರಣಾಮ ಮಾಡುತ್ತೇನೆ ಎಂದು ಹೇಳಿದರು. ದೇವೇಗೌಡರು ಇಂದು ದೇಶದ ಹಿರಿಯ ರಾಜಕಾರಣಿಗಳು. ಅವರ ಆಶೀರ್ವಾದ ಪಡೆಯೋದು ನನ್ನ ಭಾಗ್ಯ. ಇವರು ಅಂದು ಮಾತನಾಡಿದ್ದರಲ್ಲಿ ಕೆಲವೊಂದು ನನಗೆ ಅರ್ಥವಾಯಿತು. ಇವತ್ತು ಸಂಕಲ್ಪ ಪತ್ರ ಬಿಡುಗಡೆ ಮಾಡಿದ್ದೇವೆ. ಇದು ಮೋದಿ ಗ್ಯಾರಂಟಿ. ಬಡವರಿಗೆ ಮೂರು ಕೋಟಿ ಮನೆ ನಿರ್ಮಾಣ. ಫ್ರೀ ರೇಷನ್‌ಅನ್ನು ಇನ್ನೂ ಐದು ವರ್ಷ ವಿಸ್ತರಣೆ ಮಾಡಿದ್ದೇವೆ. 70 ವರ್ಷಕ್ಕಿಂತ ಹಿರಿಯರಿಗೂ ಆಯುಷ್ಮಾನ್ ಭಾರತ್ ಯೋಜನೆಯನ್ನು ಮುಂದುವರಿಸಲಿದ್ದೇವೆ. ಇದು ಮೋದಿ ಗ್ಯಾರಂಟಿ ಎಂದು ಹೇಳಿದರು.
ಕರ್ನಾಟಕ ದೇಶದ ಐಟಿ ಮತ್ತು ಟೆಕ್ನಾಲಜಿ ಹಬ್ ಆಗಿದೆ. ಇಲ್ಲಿನ ಯುವಕರಿಗೆ ಇದರ ಹೆಚ್ಚಿನ ಲಾಭ ಸಿಗಬೇಕು. ನಾವು ಸಂಕಲ್ಪ ಪತ್ರದಲ್ಲಿ ಸ್ಥಳೀಯ ಭಾಷೆಗಳ ಪ್ರೋತ್ಸಾಹ ನೀಡುವುದಾಗಿ ಹೇಳಿದ್ದೇವೆ. ಕನ್ನಡ ದೇಶದ ಸಮೃದ್ಧ ಭಾಷೆ. ಬಿಜೆಪಿಯ ಈ ಮಿಷನ್‌ನಿಂದ ಕನ್ನಡದ ವಿಸ್ತಾರವಾಗುತ್ತದೆ ಹಾಗೂ ಹೆಚ್ಚಿನ ಮಾನ್ಯತೆ ಸಿಗುತ್ತದೆ. ಮೈಸೂರು, ಹಂಪಿ ಬಾದಾಮಿ ರೀತಿಯ ಹೆರಿಟೇಜ್ ಸೈಟ್‌ಗಳನ್ನು ವಿಶ್ವ ಟೂರಿಸಂ ಭೂಪಟದಲ್ಲಿ ಪ್ರಮೋಟ್ ಮಾಡಲಿದ್ದೇನೆ. ಇದರಿಂದ ಕರ್ನಾಟಕದಲ್ಲಿ ಟೂರಿಂಸಂ ಹಾಗೂ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಇವೆಲ್ಲವೂ ಜಾರಿಯಾಗಲು ಬಿಜೆಪಿ ಅಗತ್ಯವಿದೆ. ಎನ್‌ಡಿಎ ಅಗತ್ಯದೆ. ಎನ್‌ಡಿಎ ಏನು ಹೇಳುತ್ತೋ ಅದನ್ನು ಮಾಡುತ್ತದೆ. 370ನೇ ವಿಧಿ, ತ್ರಿವಳಿ ತಲಾಕ್, ರಾಮ ಮಂದಿರವೇ ಆಗಲಿ ಬಿಜೆಪಿಯ ಸಂಕಲ್ಪವೇ ಮೋದಿಯ ಗ್ಯಾರಂಟಿ. ಮೋದಿಯ ಗ್ಯಾರಂಟಿಗೆ ಹೆಚ್ಚಿನ ಬಲ ನಿಮ್ಮ ಒಂದು ವೋಟ್‌ನಿಂದ ಸಿಗುತ್ತದೆ. ನಿಮ್ಮ ಒಂದು ಮತ, ನನ್ನ ಬಲವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಹೇಳಿದರು.
ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ 4 ಕ್ಷೇತ್ರದ ಮೈತ್ರಿ ಅಭ್ಯರ್ಥಿಗಳ ಪರವಾಗಿ ಮತ ಯಾಚನೆ ಮಾಡಿದರು. ಈ ವೇಳೆ ವೇದಿಕೆಯಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹಾಗೂ 4 ಕ್ಷೇತ್ರಗಳ ಎನ್.ಡಿ.ಎ ಅಭ್ಯರ್ಥಿಗಳು ಉಪಸ್ಥಿತರಿದ್ದರು.
ವೇದಿಕೆಗೆ ಆಗಮಿಸಿದ ಬೆನ್ನಲ್ಲಿಯೇ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಬಳಿ ಬಂದು ಮೋದಿ ನಮಸ್ಕಾರ ಮಾಡಿದರು. ಇದೇ ವೇಳೆ ಹಾಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಬೆನ್ನಿಗೆ ಗುದ್ದಿದರು. ಮೋದಿ ಅವರಿಗೆ ಸ್ವಾಗತದ ವೇಳೆ ದೇವೇಗೌಡ ಅವರು ಎದ್ದುನಿಲ್ಲಲು ಸಿದ್ಧವಾದಾಗ ಮೋದಿ ಬೇಡ ಬೇಡ ಎಂದರು. ಹಾಗಿದ್ದರೂ ಬಿಜೆಪಿ ನಾಯಕ ರಾಮ್‌ದಾಸ್ ಸಹಾಯದಿಂದ ನಿಂತುಕೊಂಡ ದೇವೇಗೌಡ ಮೋದಿ ಅವರಿಗೆ ಶಾಲು ಹಾಕಿ ಸನ್ಮಾನಿಸಿದರು. ಈ ವೇಳೆ ಮೋದಿ ಅವರಿಗೆ ಅಂಬೇಡ್ಕರ್ ಅವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಲಾಯಿತು.