ಮುಂಬಯಿ: ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಕಾರಿನಲ್ಲಿ ಅಪಘಾತ ಎಸಗಿ ಪರಾರಿಯಾಗಿದ್ದ ಮತ್ತೊಂದು ಘಟನೆ ಮಹಾರಾಷ್ಟ್ರದ ಮುಂಬಯಿಯಲ್ಲಿ ನಡೆದಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಿವಸೇನೆ ನಾಯಕ ಪುತ್ರ ಮಿಹಿರ್ ಎಂಬಾತ ಕುಡಿದ ಅಮಲಿನಲ್ಲಿ ಅಪಘಾತ ಎಸಗಿದ್ದಾನೆ. ಅಪಘಾತದಲ್ಲಿ ಸ್ಕೂಟರ್‌ನಲ್ಲಿದ್ದ ದಂಪತಿ ಗಂಭೀರವಾಗಿ ಗಾಯಗೊಂಡಿದ್ದು, ಪತ್ನಿ ಸಾವನ್ನಪ್ಪಿ ಪತಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಪಬ್‌ವೊಂದರಲ್ಲಿ ನಡುರಾತ್ರಿವರೆಗೆ ಕುಡಿದು ಚಿತ್ತಾಗಿದ್ದ ಮಿಹಿರ್ ತನ್ನ ಚಾಲಕನಿಗೆ ಲಾಂಗ್ ಡ್ರೈವ್ ಹೋಗುವಂತೆ ಸೂಚನೆ ನೀಡಿದ್ದ. ಈ ವೇಳೆ ವರ್ಲಿಗೆ ಬರುತ್ತಿದ್ದಂತೆ ತಾನೇ ಕಾರು ಚಲಾಯಿಸಲು ಮುಂದಾಗಿದ್ದ ಎನ್ನಲಾಗಿದೆ. ಚಾಲಕ ಎಷ್ಟೇ ಬೇಡ ಎಂದರೂ ಕೇಳದ ತಾನೇ ಕಾರು ಚಲಾಯಿಸಿ, ಅಪಘಾತ ನಡೆಸಿದ್ದಾನೆ.
ಈ ವೇಳೆ ದಂಪತಿ ಚಲಿಸುತ್ತಿದ್ದ ಸ್ಕೂಟರ್‌ಗೆ ಕಾರು ಗುದ್ದಿದೆ. ಗುದ್ದಿದ ರಭಸಕ್ಕೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಆದರೆ, ಮಿಹಿರ್ ಶಾ ಅಲ್ಲಿಂದ ಪರಾರಿಯಾಗಿದ್ದು, ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದರೂ, ಪತ್ನಿ ಸಾವನ್ನಪ್ಪಿದ್ದಾರೆ. ಪತಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಕಾರು ಜಪ್ತಿ, ಚಾಲಕ ವಶಕ್ಕೆ : ಅಪಘಾತ ನಡೆಸಿದ ನಂತರ ಮಿಹಿರ್ ಶಾ ತಲೆಮರೆಸಿಕೊಂಡಿದ್ದು, ಪ್ರಕರಣ ವೈರಲ್ ಆಗುತ್ತಿದ್ದಂತೆ ವರ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಮಿಹಿರ್ ಶಾ ತಂದೆ ಹಾಗೂ ಕಾರು ಚಾಲಕನನ್ನು ಅರೆಸ್ಟ್ ಮಾಡಿರುವ ಪೊಲೀಸರು, ಮಿಹಿರ್ ಶಾಗಾಗಿ ಹುಟುಕಾಟ ನಡೆಸುತ್ತಿದ್ದಾರೆ.

