ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-2 ಆರೋಪಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಕಳೆದ 3 ದಿನಗಳಿಂದ ಭಾರಿ ಜ್ವರದಿಂದ ಬಳಲುತ್ತಿರುವ ದರ್ಶನ್ ಅವರಿಗೆ ನುರಿತ ವೈದ್ಯರು ಜೈಲಿನ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ.
ಆದಾಗ್ಯೂ ದರ್ಶನ್ ಅವರಿಗೆ ಜೈಲಿನಲ್ಲಿ ಮನೆ ಊಟ, ಹಾಸಿಗೆ, ಪುಸ್ತಕ ನೀಡಬೇಕೆಂದು ಅವರ ಪರ ವಕೀಲರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿ ವಿಚಾರಣೆ ಈಗಾಗಲೇ ಅಂತ್ಯವಾಗಿದ್ದು ಜುಲೈ 25 ಕ್ಕೆ ತೀರ್ಪು ಪ್ರಕಟವಾಗಲಿದೆ. ಅಲ್ಲಿಯವರೆಗೆ ದರ್ಶನ್ ಅವರಿಗೆ ಜೈಲಿನ ಊಟವೇ ಗತಿ ಎಂಬ ಸಂಕಷ್ಟದ ಸ್ಥಿತಿ ಎದುರಾಗಿದೆ.
ಸರಿಯಾದ ಊಟ ಇಲ್ಲದೆ ಜೈಲಿನಲ್ಲಿ ಸೊರಗಿ ಸೊರಗಿ ಬರೋಬ್ಬರಿ 15 ಕೆಜಿ ತೂಕ ಕಳೆದುಕೊಂಡು ನಿತ್ರಾಣವಾಗಿರುವ ನಟ ದರ್ಶನ್ ಇದೀಗ ಜೈಲಿನಲ್ಲಿ ಭಾರೀ ಜ್ವರದಿಂದ ಬಳಲುತ್ತಿರುವುದು ಅವರ ಕುಟುಂಬ, ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತರು ಹಾಗೂ ಸ್ಯಾಂಡಲ್ ವುಡ್ ನಿರ್ಮಾಪಕರು, ನಿರ್ದೇಶಕರು ಸೇರಿ ಗಾಂಧಿನಗರದ ಕಲಾವಿದರಿಗೆ ದುಃಖ ತಂದಿದೆ.