ಮೈಸೂರಿಗೆ ಪಾದಯಾತ್ರೆ ನಡೆಸಲು ಮೈತ್ರಿ ತೀರ್ಮಾನ
ಎಚ್.ಡಿ.ಕೆ. ಅಣತಿಗಾಗಿ ಕಾಯುತ್ತಿದೆ ರಾಷ್ಟ್ರೀಯ ಪಕ್ಷ
ವೈಟ್ ಪೇಪರ್ ವಿಶೇಷ
ಬೆಂಗಳೂರು : ಮೂಡಾ ಹಗರಣವನ್ನೇ ಬ್ರಹ್ಮಾಸ್ತ್ರವನ್ನಾಗಿ ಮಾಡಿಕೊಂಡಿರುವ ಬಿಜೆಪಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರನ್ನು ಹಣಿಯಲು ರಣತಂತ್ರ ರೂಪಿಸಿದೆ. ಆದರೆ, ಅದರ ಸಂಪೂರ್ಣ ಹೊಣೆಗಾರಿಕೆಯನ್ನು ಮಾತ್ರ ಮೈತ್ರಿ ಪಕ್ಷದ ನಾಯಕ ಕುಮಾರಸ್ವಾಮಿ ಕೈಗಿಟ್ಟಿದೆ.
ಅತಿಹೆಚ್ಚು ರಾಜ್ಯದಲ್ಲಿ ಅಧಿಕಾರದಲ್ಲಿರುವ, ಕೇಂದ್ರದಲ್ಲಿ ಸತತ ಮೂರನೇ ಸಲ ಅಧಿಕಾರ ಹಿಡಿದಿರುವ ಪಕ್ಷವೊಂದು ರಾಜ್ಯದಲ್ಲಿ ಸಿಎಂ ವಿರುದ್ಧದ ಹೋರಾಟವೊಂದಕ್ಕೆ ಪ್ರಾದೇಶಿಕ ಪಕ್ಷವೊಂದರ ಮೊರೆ ಹೋಗುತ್ತಿರುವುದು ಎಷ್ಟು ಸರಿ ಎಂಬ ಚರ್ಚೆಯೊಂದು ಇದೀಗ ಜೋರಾಗಿ ಕೇಳಿಬರುತ್ತಿದೆ.
ಮೂಡಾ ಹಗರಣದಲ್ಲಿ ಸಿಎಂ ಸ್ವತಃ ಪಾಲುದಾರರು ಎಂದು ಸದನದಲ್ಲಿ ಗದ್ದಲ ಎಬ್ಬಿಸಿದ ಬಿಜೆಪಿ, ಅದರ ವಿರುದ್ಧ ಅಹೋರಾತ್ರಿ ಧರಣಿ ನಡೆಸಿದ್ದರು. ವಿಧಾನಸೌಧದಲ್ಲಿಯೇ ಠಿಕಾಣಿ ಹೂಡಿ, ಒಂದು ದಿನ ಮುಂಚಿತವಾಗಿಯೇ ಸದನದ ಕಲಾಪಗಳನ್ನು ಮುಗಿಸುವಂತೆ ಮಾಡುವ ಮೂಲಕ ಒಂದು ಮಟ್ಟಿಗಿನ ಯಶಸ್ಸು ಸಂಪಾದಿಸಿದೆ ಎನ್ನಬಹುದು.
ಇದೀಗ ಬಿಜೆಪಿ, ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದು, ಸಿದ್ದರಾಮಯ್ಯ ಅವರಿಗೆ ಅವರದ್ದೇ ರೀತಿಯಲ್ಲಿ ಉತ್ತರ ನೀಡಲು ಸಜ್ಜಾಗಿದೆ. ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಬಳ್ಳಾರಿ ಪಾದಯಾತ್ರೆ ನಡೆಸಿ, ಮೊದಲ ಬಾರಿಗೆ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಗೆ, ಪಾದಯಾತ್ರೆಯ ಮೂಲಕ ಅಧಿಕಾರದ ಕಂಟಕ ತರುವುದು ಬಿಜೆಪಿಯ ಆಲೋಚನೆಯಾಗಿದೆ.
ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ: ಆದರೆ, ಪಾದಯಾತ್ರೆ ನೇತೃತ್ವ ಜೆಡಿಎಸ್ ನಾಯಕ ಕೇಂದ್ರ ಸಚಿವ ಕುಮಾರಸ್ವಾಮಿ ಅವರದ್ದು ಎಂಬುದೀಗ ಬಿಜೆಪಿ ವಲಯದಲ್ಲಿಯೇ ಹೋರಾಟಕ್ಕೆ ಮೀನಾ ಮೇಷ ಉಂಟಾಗಲು ಕಾರಣವಾಗಿದೆ. ಪಾದಯಾತ್ರೆ ನಡೆಯುವ ಮೂರು ಜಿಲ್ಲೆಗಳ ವ್ಯಾಪ್ತಿ ಜೆಡಿಎಸ್ ಭದ್ರಕೋಟೆ, ಹೀಗಾಗಿ, ಅವರ ನೇತೃತ್ವದಲ್ಲಿ ನಡೆಯಲಿ ಎಂದು ಹೈಕಮಾಂಡ್ ಆದೇಶವಂತೆ. ಇದು ಕೆಲವು ಬಿಜೆಪಿ ಹಿರಿಯ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಹಿರಿಯ ಬಿಜೆಪಿ ನಾಯಕರ ಆಕ್ರೋಶ: ಬಿಜೆಪಿಗೆ ಸ್ವಂತ ಬಲದ ಮೇಲೆ ಹೋರಾಟ ನಡೆಸುವ ಎಲ್ಲ ಶಕ್ತಿಯೂ ಇದೆ. ಆದರೆ, ಎಲ್ಲದಕ್ಕೂ ಕುಮಾರಸ್ವಾಮಿ ಅವರನ್ನು ಮುಂದೆ ಬಿಟ್ಟು ಅವರನ್ನು ದೊಡ್ಡವರನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ. ಇದು ಸಹಜವಾಗಿಯೇ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲವನ್ನು ಕುಗ್ಗಿಸಲಿದೆ. ಜತೆಗೆ, ಒಕ್ಕಲಿಗ ನಾಯಕತ್ವವನ್ನು ವೀಕ್ ಮಾಡಿದಂತಾಗುತ್ತಿದೆ ಎಂದು ಒಳಗೊಳಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೋಡೋಣ ಪಾದಯಾತ್ರೆಯ ಫಲಿತಾಂಶ ಏನಾಗುತ್ತೆ ಎಂದು ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ.

