ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷ ಬಿಜೆಪಿ ನಾಯಕರು ಬೆಂಗಳೂರು ಮತ್ತು ಮೈಸೂರಿನಲ್ಲಿ ಮುಡಾ ಸೈಟ್ ಹಂಚಿಕೆ ಹಗರಣದಲ್ಲಿ ಭಾಗಿಯಾದ್ದಾರೆಂದು ಆರೋಪಿಸಿ ಕಳೆದ 3 ದಿನಗಳಿಂದ ಬೀದಿಗಿಳಿದು ನಿರಂತರ ಹೋರಾಟ ನಡೆಸುತ್ತಿದೆ.
ಹಿಂದಿನ ಮಾಜಿ ಸಚಿವ ತಥಾ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಸಿ.ಟಿ.ರವಿ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿ.ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಾವಾಗ ಬೆಂಗಳೂರಿನಲ್ಲಿ ಬೀದಿಗಿಳಿದು ಹೋರಾಟ ಆರಂಭಿಸಿತೋ ಆಗಲೇ ಸಿಎಂ ಸಿದ್ದರಾಮಯ್ಯ ಅವರು ಹಿಂದಿನ ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ಸೂಚಿಸಿದರು.
ಅದರಂತೆ ಸಿಐಡಿ ಭೋವಿ ನಿಗಮದ 60 ಕೋಟಿ ರೂ. ಹಗರಣದ ತನಿಖೆ ಕೈಗೆತ್ತಿಕೊಂಡಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೋವಿ ನಿಗಮದಲ್ಲಿ 120 ಫಲಾನುಭವಿಗಳ ಹೆಸರಿನಲ್ಲಿ ಸಾಲ ಮಂಜೂರಾತಿ ಮಾಡಿ 60 ಕೋಟಿ ರೂ. ಗುಳುಂ ಮಾಡಲಾಗಿದೆ.
ಈ ಹಣವನ್ನು 100 ಕ್ಕೂ ಹೆಚ್ಚಿನ ಖಾತೆಗಳಿಗೆ ವರ್ಗಾಯಿಸಿ ನಿಗಮದ ಪ್ರಧಾನ ವ್ಯವಸ್ಥಾಪಕ ಸೇರಿ 27 ಮಂದಿ ಜೇಬಿಗಿಳಿಸಿದ್ದಾರೆ ಎಂದು ಸಿಐಡಿ ತನಿಖೆಯಲ್ಲಿ ತಿಳಿದುಬಂದಿದೆ.
ಇದರಿಂದ ರಾಜ್ಯ ಬಿಜೆಪಿಗೆ ಹಿಂದಿನ ಭೋವಿ ನಿಗಮದ ಹಗರಣವನ್ನು ಬಯಲಿಗೆಳೆಯುವ ಮೂಲಕ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡುವುದು ಖಚಿತವಾಗಿದೆ.

