ಉಪಯುಕ್ತ ರಾಜಕೀಯ ಸುದ್ದಿ

ಅಸ್ಸಾಂನಲ್ಲಿ ಸ್ಥಳೀಯರಿಗಷ್ಟೇ ಸರಕಾರಿ ಉದ್ಯೋಗ

Share It

ಬೆಂಗಳೂರು: ಅಸ್ಸಾಂ ಸರಕಾರ ಅಲ್ಲಿನ ಸ್ಥಳೀಯರಿಗಷ್ಟೇ ಸರಕಾರಿ ಉದ್ಯೋಗ ನೀಡುವ ನಿಟ್ಟಿನಲ್ಲಿ ಕಾಯಿದೆಯೊಂದನ್ನು ಜಾರಿಗೆ ತರಲು ನಿರ್ಧರಿಸಿದೆ.

ಅಸ್ಸಾಂನಲ್ಲಿ ಜನಿಸಿದವರಿಗಷ್ಟೇ ಸರಕಾರಿ ಉದ್ಯೋಗ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರುವ ಕುರಿತು ಸಿಎಂ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಇದು ಜೀವನ್ಮರಣದ ಮತ್ತು ಅತ್ಯಂತ ಕಾಳಜಿಯ ನಿರ್ಧಾರವಾಗಿದ್ದು, ರಾಜ್ಯದ ಡೆಮಾಗ್ರಫಿಯನ್ನು ಬದಲಾಯಿಸುವ ಬೆಳವಣಿಗೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರಕಾರ ಕೂಡ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಮೀಸಲಾತಿ ಮಸೂದೆ ಜಾರಿಗೆ ತರಲು ನಿರ್ಧರಿಸಿತ್ತು. ಇದು ದೊಡ್ಡ ದೊಡ್ಡ ಉದ್ಯಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಸಧ್ಯಕ್ಕೆ ಮಸೂದೆಯನ್ನು ಸರಕಾರ ತಡೆಹಿಡಿದಿದೆ.

ಇದೇ ಸಂದರ್ಭದಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ಕೂಗು ಉತ್ತರ ಭಾರತಕ್ಕೂ ವ್ಯಾಪಿಸಿದಂತಾಗಿದ್ದು, ಅಸ್ಸಾಂ ತನ್ನ ಸರಕಾರಿ ಉದ್ಯೋಗಗಳನ್ನು ರಾಜ್ಯದಲ್ಲಿ ಜನಿಸಿದವರಿಗಷ್ಟೇ ನೀಡಲು ತೀರ್ಮಾನಿಸಿದೆ. ಇದು ಸಾಧ್ಯವಾಗಿದ್ದೇ ಆದರೆ, ಬೇರೆ ರಾಜ್ಯದಲ್ಲಿ ಕಲಿತು, ಅಸ್ಸಾಂಗೆ ತೆರಳಿ ಉದ್ಯೋಗ ಪಡೆಯುವ ಆಸೆಯಿರುವವರು ತೊಂದರೆ ಅನುಭವಿಸಲಿದ್ದಾರೆ.

ಈ ನಡುವೆ ಅಸ್ಸಾಂ ಸರಕಾರದ ತೀರ್ಮಾನ ರಾಜ್ಯ ಸರಕಾರದ ಉದ್ಯೋಗಕ್ಕೆ ಮೀಸಲಾಗಿರುತ್ತದೆಯೋ ಅಥವಾ ಕೇಂದ್ರ ಸರಕಾರದ ಉದ್ಯೋಗಗಳಲ್ಲಿಯೇ ಸ್ಥಳೀಯರಿಗೆ ಅವಕಾಶ ಸಿಗುವಂತೆ ಕಾನೂನು ಜಾರಿಗೇನಾದರೂ ಪ್ರಯತ್ನ ನಡೆಸುತ್ತದೆಯೋ ಎಂಬ ಬಗ್ಗೆ ಏನೂ ಸ್ಪಷ್ಟತೆ ಸಿಕ್ಕಿಲ್ಲ. ಒಟ್ಟಾರೆ, ಸಿಎಂ ನಿರ್ಧಾರವಂತೂ ಸಂಚಲನ ಸೃಷ್ಟಿಸಿದೆ.


Share It

You cannot copy content of this page