ಬೆಂಗಳೂರು: ಯಾದಗಿರಿ ಪೋಲಿಸ್ ಇನ್ಸ್ಪೆಕ್ಟರ್ ಪರುಶುರಾಮ್ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಅವರ ಪತ್ನಿಗೆ ಸರಕಾರಿ ಉದ್ಯೋಗ ನೀಡುವ ಭರವಸೆಯನ್ನು ಸರಕಾರ ನೀಡಿದೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರುಶುರಾಮ್ ಅವರು ಶಾಸಕ ಚೆನ್ನಾರೆಡ್ಡಿ ಲಂಚದ ಕಿರುಕುಳ ನೀಡಿದ್ದರು ಎಂಬ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಶಾಸಕ ಮತ್ತು ಅವರ ಪುತ್ರನ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.
ಈ ನಡುವೆ ಪರುಶುರಾಮ್ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಸೂಕ್ತ ತನಿಖೆಗೆ ಪಟ್ಟುಹಿಡಿದಿದ್ದಾರೆ. ಈ ನಡುವೆ ಗೃಹಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ಪರುಶುರಾಮ್ ಸಾವಿನ ತನಿಖೆಯನ್ನು ಸಿಐಡಿಗೆ ವಹಿಸಿದ್ದು, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಜತೆಗೆ, ಪರುಶುರಾಮ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಸರಕಾರ ನಿರ್ಧರಿಸಿದ್ದು, ಆತನ ಪತ್ನಿಗೆ ಸರಕಾರಿ ಉದ್ಯೋಗ ನೀಡುವ ಕುರಿತಂತೆಯೂ ಸರಕಾರ ತೀರ್ಮಾನ ಮಾಡಿದೆ. ಶೀಘ್ರದಲ್ಲಿಯೇ ಈ ಕುರಿತು ಸಿಎಂ ಜತೆ ಚರ್ಚೆ ನಡೆಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳೀಸಿದ್ದಾರೆ.

