ಉಪಯುಕ್ತ ಸುದ್ದಿ

ವಯನಾಡಿನ ಭೂಕುಸಿತ ಸಂತ್ರಸ್ತ ಜೀವಗಳಿಗೆ ಸಹಾಯ ಹಸ್ತ ಚಾಚಿದ ಅಕ್ಷಯ ಪಾತ್ರ ಫೌಂಡೇಶನ್

Share It

ಬೆಂಗಳೂರು: ಕರ್ನಾಟಕ ಮೂಲದ ಅಕ್ಷಯ ಪಾತ್ರ ಫೌಂಡೇಶನ್ ಕೇರಳದ ವಯನಾಡಿನಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದ ಸಂಕಷ್ಟಕ್ಕೆ ಈಡಾಗಿರುವ ಜನರಿಗೆ ಅಗತ್ಯ ನೆರವನ್ನು ಒದಗಿಸುವ ನಿಟ್ಟಿನಲ್ಲಿ ಪರಿಹಾರ ಕಾರ್ಯಾಚರಣೆ ಆರಂಭಿಸಿದೆ. ಕರ್ನಾಟಕ ಸರ್ಕಾರದ ನೆರವಿನಿಂದ ನಡೆಯುತ್ತಿರುವ ಈ ಕಾರ್ಯಾಚಾರಣೆ ಮೂಲಕ ಸಂತ್ರಸ್ತರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಗುತ್ತಿದೆ.

ಅಕ್ಷಯ ಫೌಂಡೇಶನ್ ಭೂಕುಸಿತ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈಗಾಗಲೇ 1,000 ದಿನಸಿ ಕಿಟ್‌ಗಳನ್ನು ವಿತರಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ 9,000 ಕಿಟ್‌ಗಳನ್ನು ತಲುಪಿಸಲು ಸಿದ್ಧತೆ ನಡೆಸಿದೆ. ಈ ದಿನಸಿ ಕಿಟ್‌ನಲ್ಲಿ ಅಕ್ಕಿ, ಗೋಧಿ ಹಿಟ್ಟು, ಕಡಲೆಕಾಯಿ, ಅಡುಗೆ ಎಣ್ಣೆ, ಸಾಂಬಾರ್ ಪುಡಿ, ಅರಿಶಿನ ಪುಡಿ, ಸಕ್ಕರೆ, ಉಪ್ಪು, ಬಿಸ್ಕತ್ತುಗಳು ಮತ್ತು ಓಆರ್‌ಎಸ್ ಪ್ಯಾಕೆಟ್‌ಗಳಂತಹ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ.

ಈ ಒಂದು ದಿನಸಿ ಕಿಟ್ ಪೌಷ್ಠಿಕಾಂಶ ಭರಿತ 42 ಊಟಗಳನ್ನು ಒದಗಿಸಲಿದೆ ಎಂದು ಅಂದಾಜಿಸಲಾಗಿದ್ದು, ಮೂರು ಜನ ಇರುವ ಒಂದು ಕುಟುಂಬವು ಕನಿಷ್ಠ ಒಂದು ವಾರ ಈ ದಿನಸಿ ಕಿಟ್ ಬಳಸಿಕೊಂಡು ಊಟ ಮಾಡಬಹುದಾಗಿದೆ.

ಕಲ್ಪೆಟ್ಟಾದ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಫೌಂಡೇಶನ್ ನ ತಂಡ ಬೀಡು ಬಿಟ್ಟಿದ್ದು, ಎಲ್ಲಾ ಕಾರ್ಯಾಚರಣೆಗಳನ್ನು ಅಲ್ಲಿಂದಲೇ ನಡೆಸುತ್ತಿದೆ. ದಿನಸಿ ಕಿಟ್ ಗಳ ಸಾಗಣೆಯಿಂದ ಹಿಡಿದು ವಿತರಣೆವರೆಗಿನ ಕೆಲಸಗಳು ಸುಗಮವಾಗಿ ಆಗಲು ಫೌಂಡೇಶನ್ ನ ತಂಡ ಶ್ರಮ ವಹಿಸುತ್ತಿದೆ.

ಜಿಲ್ಲಾಧಿಕಾರಿಗಳನ್ನು ಒಳಗೊಂಡು ಸ್ಥಳೀಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಿಜವಾದ ಫಲಾನುಭವಿಗಳಿಗೆ ದಿನಸಿ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ಇದರ ಜೊತೆಗೆ ಕಷ್ಟದಲ್ಲಿರುವವರಿಗೆ ನೆರವಾಗಲು ಬೇಯಿಸಿದ ಊಟವನ್ನು ನೀಡುವ ಕುರಿತಾಗಿ ಅಕ್ಷಯ ಪಾತ್ರ ಫೌಂಡೇಶನ್ ದಾರಿ ಹುಡುಕುತ್ತಿದೆ.

ಅಕ್ಷಯ ಪಾತ್ರ ಫೌಂಡೇಶನ್‌ ಉಪಾಧ್ಯಕ್ಷ ಚಂಚಲಪತಿ ದಾಸ ಮಾತನಾಡಿ, “ಕಷ್ಟದ ಸಮಯದಲ್ಲಿ ನೊಂದ ಕಣ್ಣೀರು ಒರೆಸುವ ಪ್ರಯತ್ನ ಮಾಡುತ್ತಿದ್ದೇವೆ. ಈ ಪ್ರಯತ್ನಕ್ಕೆ ರಾಜ್ಯ ಸರ್ಕಾರದ ಮಹತ್ವದ ನೆರವು ದೊರೆತಿದೆ. ದಾನಿಗಳು ಮನಪೂರ್ವಕವಾಗಿ ಮಾಡಿರುವ ದಾನ ಸಹಾಯ ಮಾಡಿದೆ. ನಾವು ತಕ್ಷಣದ ಅಗತ್ಯ ಪೂರೈಸುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇವೆ. ಕಷ್ಟದಲ್ಲಿರುವವರಿಗೆ ಭರವಸೆ ತುಂಬಲಿದ್ದೇವೆ ಎಂದು ಹೇಳಿದರು.

ಅಕ್ಷಯ ಪಾತ್ರ ಫೌಂಡೇಶನ್ ತನ್ನ ಅಡುಗೆ ಸೌಲಭ್ಯಗಳು ಮತ್ತು ರಾಷ್ಟ್ರೀಯ ಸ್ವಯಂಸೇವಕ ಜಾಲವನ್ನು ಬಳಸಿಕೊಂಡು ಕಷ್ಟದಲ್ಲಿರುವ ಜೀವಗಳಿಗೆ ನೆರವಾಗಲು ಸದಾ ಸಿದ್ಧವಾಗಿರುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಯೋಗದಿಂದ ಸಂತ್ರಸ್ತರ ತುರ್ತು ಅಗತ್ಯ ಪರಿಣಾಮಕಾರಿಯಾಗಿ ಪೂರೈಸಲು ಪ್ರತಿಷ್ಠಾನವು ಬದ್ಧವಾಗಿದೆ.


Share It

You cannot copy content of this page