ನಟ-ನಿರ್ಮಾಪಕ-ನಿರ್ದೇಶಕ ದ್ವಾರಕೀಶ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ಬೆಂಗಳೂರು:
ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ನಟ ದ್ವಾರಕೀಶ್ ಅವರು ಇಂದು (ಏಪ್ರಿಲ್ 16) ನಿಧನರಾಗಿದ್ದು ನೋವಿನ ಸಂಗತಿ. ಹೃದಯಾಘಾತದಿಂದ 81ನೇ ವಯಸ್ಸಿನಲ್ಲಿ ಮೃತರಾದ ದ್ವಾರಕೀಶ್ ಅವರಿಗೆ ಎಲ್ಲರೂ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು, ರಾಜಕಾರಣಿಗಳು ದ್ವಾರಕೀಶ್ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ದ್ವಾರಕೀಶ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಎಕ್ಸ್ (ಟ್ವಿಟರ್) ಖಾತೆಯ ಮೂಲಕ ದ್ವಾರಕೀಶ್ ಅವರಿಗೆ ಮೋದಿ ನಮನ ಸಲ್ಲಿಸಿದ್ದಾರೆ.
‘ದಶಕಗಳ ಕಾಲ ಮರೆಯಲಾಗದ ಅಭಿನಯ ಮತ್ತು ಭಿನ್ನವಾದ ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ದ್ವಾರಕೀಶ್ ಅವರು ನೀಡಿದ ಕೊಡುಗೆ ಅಪಾರ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ, ಪ್ರೇಕ್ಷಕರನ್ನು ಸೆಳೆದುಕೊಳ್ಳುವ ಮೂಲಕ ಕನ್ನಡ ಚಿತ್ರರಂಗವನ್ನು ಅವರು ಬೆಳೆಸಿದರು. ಅವರ ನಿಧನದಿಂದ ದುಃಖ ಆಗಿದೆ. ಅದ್ಭುತವಾದ ಅವರ ಸಿನಿಮಾ ಪಯಣವನ್ನು ನಾವು ಸದಾ ಸ್ಮರಿಸುತ್ತೇವೆ. ಅವರ ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ಸಂತಾಪಗಳು’ ಎಂದು ನರೇಂದ್ರ ಮೋದಿ ಪೋಸ್ಟ್ ಮಾಡಿದ್ದಾರೆ.
ನಟ ಪ್ರಕಾಶ್ ರಾಜ್ ಕೂಡ ದ್ವಾರಕೀಶ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
‘ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್. ಅಪಾರ ಜೀವನ ಪ್ರೀತಿಯ.. ಚಿಲುಮೆ.. ಕನ್ನಡ ಚಿತ್ರರಂಗವನ್ನು ತನ್ನ ಮಹತ್ವಾಕಾಂಕ್ಷೆಯಿಂದ ಶ್ರೀಮಂತಗೊಳಿಸಿದ ಕನಸುಗಾರ. ಇನ್ನು ನಮ್ಮೊಂದಿಗಿಲ್ಲ.. ಆದರೆ ಅವರ ಕೊಡುಗೆ ಚಿರಸ್ಮರಣೀಯ. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಚೀಫ್. ಎಲ್ಲದಕ್ಕೂ ಧನ್ಯವಾದಗಳು’ ಎಂದು ಪ್ರಕಾಶ್ ರಾಜ್ ಅವರು ಟ್ವೀಟ್ ಮಾಡಿದ್ದಾರೆ.
ರಜನಿಕಾಂತ್ ಪೋಸ್ಟ್:
‘ನನ್ನ ಆತ್ಮೀಯ ಸ್ನೇಹಿತ ದ್ವಾರಕೀಶ್ ಅಗಲಿಕೆಯಿಂದ ನನಗೆ ತೀವ್ರ ನೋವಾಗಿದೆ. ಹಾಸ್ಯ ನಟನಾಗಿ ದ್ವಾರಕೀಶ್ ಅವರು ವೃತ್ತಿ ಜೀವನ ಪ್ರಾರಂಭಿಸಿದ್ದರು. ಬಳಿಕ ಬಹು ದೊಡ್ಡ ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿ ಅವರಯ ಬೆಳೆದು ನಿಂತರು. ಆ ಎಲ್ಲ ಘಟನೆಗಳು ನನಗೆ ಈಗ ನೆನಪಾಗುತ್ತಿವೆ. ಅವರ ಕುಟುಂಬದವರಿಗೆ ಮತ್ತು ಆಪ್ತರಿಗೆ ನನ್ನ ಸಂತಾಪಗಳು’ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಅವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.