ರಾಜಕೀಯ ಸುದ್ದಿ

ಇಂದು ರಾಜ್ಯಾದ್ಯಂತ ಬಲಪ್ರದರ್ಶನ ಪರ್ವ

Share It

ಬೆಂಗಳೂರು: ಮೂಡಾ ಹಗರಣದಲ್ಲಿ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅವಕಾಶ ನೀಡಿರುವುದರ ವಿರುದ್ಧ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಇಂದು ತಮ್ಮ ಬಲಾಬಲ ಪ್ರದರ್ಶನಕ್ಕೆ ಸಜ್ಜಾಗಿವೆ.

ರಾಜ್ಯಪಾಲರ ನಿರ್ಧಾರದ ವಿರುದ್ಧ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿದ್ದರೆ, ಬಿಜೆಪಿ ಮತ್ತು ಜೆಡಿಎಸ್ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿವೆ.

ರಾಜ್ಯಪಾಲರ ನಿರ್ಧಾರ ಅಸಂವಿಧಾನಿಕ ಎಂಬುದು ಕಾಂಗ್ರೆಸ್ ವಾದ. ಸಚಿವ ಸಂಪುಟ ಸಭೆಯಲ್ಲಿ ಎಲ್ಲ ಸಚಿವರು, ಸಿಎಂ ಪರ ಗಟ್ಟಿಯಾಗಿ ನಿಲ್ಲಲು ತೀರ್ಮಾನಿಸಿದ್ದಾರೆ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಈ ನಡುವೆ ಹೈಕಮಾಂಡ್ ಮತ್ತು ರಾಜ್ಯ ಕಾಂಗ್ರೆಸ್ ಸಿಎಂ ಸಿದ್ದರಾಮಯ್ಯ ಪರ ನಿಂತಿದ್ದು, ರಾಜ್ಯಪಾಲರ ನಿರ್ಧಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದೆ‌. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯಾದ್ಯಂತ ಇಂದು ಪ್ರತಿಭಟನೆ ನಡೆಸುತ್ತಿದೆ. ರಾಜ್ಯಪಾಲರ ಮೂಲಕ ಕೇಂದ್ರ ಸರಕಾರ, ರಾಜ್ಯ ಸರಕಾರವನ್ನು ಅಸ್ಥಿರ ಗೊಳಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಿದ್ದಾರೆ.

ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಪ್ರತಿಭಟನೆ ನಡೆಸುತ್ತಿವೆ. ರಾಜ್ಯಾದ್ಯಂತ ಪ್ರತಿಭಟನೆ ಮೂಲಕ ಸಿಎಂ ಮತ್ತು ಕಾಂಗ್ರೆಸ್ ಮೇಲೆ ಒತ್ತಡ ತರುವುದು ಮೈತ್ರಿ ನಾಯಕರ ಉದ್ದೇಶವಾಗಿದೆ.


Share It

You cannot copy content of this page