ಬೆಂಗಳೂರು : ನಟ ದರ್ಶನ್ ತೂಗುದೀಪ್ ಅವರು ಕೇಂದ್ರ ಕಾರಾಗೃಹದಲ್ಲಿ ಈವರೆಗೆ ವಿಐಪಿ ಖೈದಿಯಾಗಿ ಬಿಂದಾಸ್ ಆಗಿ ಇತರೆ ಖೈದಿಗಳೊಂದಿಗೆ ಕಾಲ ಕಳೆಯುತ್ತಿದ್ದರು. ದರ್ಶನ್ ಜೈಲಿನಲ್ಲಿ ಕುಳಿತು ಸಿಗರೇಟ್ ಸೇದುತ್ತಾ, ಕಾಫಿ ಕುಡಿಯುತ್ತಾ ಇದ್ದರು. ಈ ಫೋಟೋ ವೈರಲ್ ಆಗಿತ್ತು. ಇದರ ಜೊತೆಗೆ ದರ್ಶನ್ ಅವರು ವಿಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಈ ಬಗ್ಗೆ ಗೃಹಸಚಿವ ಜಿ. ಪರಮೇಶ್ವರ್ ಮಾತನಾಡಿದ್ದಾರೆ. ಜೈಲಿನ 7 ಅಧಿಕಾರಿಗಳನ್ನು ಅವರು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.
‘ಈ ಪ್ರಕರಣದಲ್ಲಿ 7 ಅಧಿಕಾರಿಗಳನ್ನು ನಾವು ಸಸ್ಪೆಂಡ್ ಮಾಡಿದ್ದೇವೆ. ನಾನು ವರದಿಯನ್ನು ಕೇಳಿದ್ದೇವೆ. ಈ ರೀತಿಯ ಘಟನೆ ನಡೆಯಬಾರದು. ಕೆಲವರನ್ನು ಸಸ್ಪೆಂಡ್ ಮಾಡಿದ್ದು, ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಮೇಲಾಧಿಕಾರಿಗಳನ್ನು ಟ್ರಾನ್ಸ್ಫಾರ್ ಮಾಡ್ತೇನೆ. ಪದೇ ಪದೇ ಈ ರೀತಿ ಆಗಬಾರದು. ಎಲ್ಲಾ ಬಂಧೀಖಾನೆಗಳಲ್ಲಿ ಸಿಸಿಟಿವಿ ಹಾಕುತ್ತಿದ್ದೇವೆ. ಜಾಮರ್ ಹಾಕಲಾಗುತ್ತಿದೆ. ಆದಾಗ್ಯೂ ಈ ರೀತಿಯ ಘಟನೆ ನಡೆಯುತ್ತಿದೆ’ ಎಂದು ಗೃಹಸಚಿವ ಪರಮೇಶ್ವರ್ ಹೇಳಿದರು.
‘ಮೇಲಾಧಿಕಾರಿಗಳು ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದರೆ ಅವರನ್ನು ತೆಗೆದು ಹಾಕುತ್ತೇವೆ. ವರದಿ ಬಂದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಗೃಹಸಚಿವ ಪರಮೇಶ್ವರ್ ಅವರು ಭರವಸೆ ನೀಡಿದ್ದಾರೆ.
ಜೈಲಿನ ಊಟದ ವಿಚಾರ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ದರ್ಶನ್ಗೆ ಚಿಕನ್ ಬಿರಿಯಾನಿ ಕೊಟ್ಟಿಲ್ಲ. ಜೈಲಿನ ನಿಯಮದಂತೆ ನಡೆಯಲಾಗುತ್ತಿದೆ. ಈಗ ನಡೆದ ಘಟನೆ ಸಮರ್ಥಿಸಿಕೊಳ್ಳುತ್ತಿಲ್ಲ’ ಎಂದು ಗೃಹ ಸಚಿವರು ತಿಳಿಸಿದರು.
ಜೈಲಿನಲ್ಲಿ ಜಾಮರ್ ಹಾಕಿ ಹೈ ಪ್ರೀಕ್ವೆನ್ಸಿ ಇಡಲಾಗಿತ್ತಂತೆ. ಇದರಿಂದ ಪಕ್ಕದ ಏರಿಯಾಗಳಿಗೆ ತೊಂದರೆ ಆಗಿತ್ತು. ಹೀಗಾಗಿ, ಸದ್ಯ ಪ್ರೀಕ್ವೆನ್ಸಿ ಕಡಿಮೆ ಮಾಡಲಾಗಿದೆ. ‘ಫೋಟೋ ಯಾರು ತೆಗೆದರು? ಯಾರ ಮೊಬೈಲ್ನಲ್ಲಿ ತೆಗದಿದ್ದಾರೆ? ಅನ್ನೋದು ಮುಖ್ಯ ಆಗುತ್ತದೆ’ ಎಂದು ಅವರು ಹೇಳಿದ್ದಾರೆ.
ಸಸ್ಪೆಂಡ್ ಆದ ಜೈಲಾಧಿಕಾರಿಗಳಿವರು…
ಜೈಲರ್ಗಳಾದ ಶರಣಬಸವ ಅಮೀನ್ಗಢ, ಖಂಡೇವಾಲ್, ಸಹಾಯಕ ಜೈಲರ್ಗಳಾದ ಪುಟ್ಟಸ್ವಾಮಿ, ಶ್ರೀಕಾಂತ್ ತಲವಾರ್, ಜೈಲಿನ ಹೆಡ್ ವಾರ್ಡರ್ಗಳಾದ ವೆಂಕಪ್ಪ, ಸಂಪತ್, ವಾರ್ಡರ್ ಬಸಪ್ಪ ಅವರು ದರ್ಶನ್ ಗೆ ರಾಜಾತಿಥ್ಯ ನೀಡಿದ್ದಕ್ಕೆ ಸಸ್ಪೆಂಡ್ ಆದವರು.