ನೆಲಮಂಗಲ: ಬೆಂಗಳೂರಿನಲ್ಲಿ ಮಳೆಯ ಆರ್ಭಟ ಜಾಸ್ತಿಯಾಗುತ್ತಿದೆ. ಇದು ಅನೇಕ ಅನಾಹುತಗಳಿಗೂ ಕಾರಣವಾಗುತ್ತಿದೆ. ಈ ನಡುವೆ ಬೆಂಗಳೂರಿನ ಹೊರವಲಯದ ವಾಜರಹಳ್ಳಿಯಲ್ಲಿ ಮಳೆಯಿಂದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ನಡೆದಿದೆ.
ಬುಧವಾರ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಗೆ ಮನೆಯ ಗೇಟ್ ತುಂಡಾಗಿ ಬಿದ್ದ ಪರಿಣಾಮ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಯಲ್ಲಮ್ಮ ಎಂಬ ಏಳು ವರ್ಷದ ಬಾಲಕಿ ಎಂದಿನAತೆ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಬಿರುಗಾಳಿ ಮಳೆಯ ಹೊಡೆತಕ್ಕೆ ಗೇಟ್ ಹಠಾತ್ ತುಂಡಾಗಿ ಬಾಲಕಿಯ ಮೇಲೆ ರಭಸವಾಗಿ ಬಿದ್ದಿದೆ. ಗೇಟ್ ಕೆಳಗೆ ಸಿಲುಕಿದ ಬಾಲಕಿ ಯಲ್ಲಮ್ಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ರಾಯಚೂರು ಜಿಲ್ಲೆಯ ದೇವದುರ್ಗದ ಮೂಲದ ಮುಕ್ಕಣ್ಣ ಮತ್ತು ಬಾಲಮ್ಮ ದಂಪತಿಯ ಮಗಳು ಯಲ್ಲಮ್ಮ ದಂಪತಿ ಗಾರೆ ಕೆಲಸ ಮಾಡಲು ನೆಲಮಂಗಲಕ್ಕೆ ಬಂದಿದ್ದರು. ಪುತ್ರಿಯನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.