ರಾಜಕೀಯ ಸುದ್ದಿ

ಹಾಸನ ಪೆನ್ ಡ್ರೈವ್ ಪ್ರಕರಣ: ಸಿಐಡಿ ತನಿಖೆಗೆ ಒಪ್ಪಿಸಿ: ಎಎಪಿ

Share It

ಬೆಂಗಳೂರು: ಹಾಸನ ಸೇರಿದಂತೆ ರಾಜ್ಯದಾದ್ಯಂತ ಓಡಾಡುತ್ತಿರುವ ಸಾವಿರಾರು ಅಶ್ಲೀಲ ವಿಡಿಯೋಗಳುಳ್ಳ ಪೆನ್ ಡ್ರೈವ್, ಸಿಡಿ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಿಐಡಿ ತನಿಖೆಗೆ ವಹಿಸಬೇಕು. ವಿಡಿಯೊ ಕುರಿತು ವಿಧಿವಿಜ್ಞಾನ ಪರೀಕ್ಷೆ ನಡೆಸಿ ವಂಚಕನನ್ನು ಬಂಧಿಸಬೇಕು. ಆತ ಎಷ್ಟೇ ಪ್ರಭಾವಿಯಾದರೂ ಕಾನೂನುಬದ್ಧ ಕ್ರಮಕೈಗೊಳ್ಳಬೇಕು. ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ನೀಡಬೇಕು. ವಿಡಿಯೋಗಳನ್ನು ಹಂಚಿಕೆ ಮಾಡುತ್ತಿರುವವರಿಗೆ ಕಡಿವಾಣ ಹಾಕಬೇಕು ಎಂದು ಆಮ್ ಆದ್ಮಿ ಪಾರ್ಟಿ ಮಹಿಳಾ ಘಟಕದ ಅಧ್ಯಕ್ಷೆ ಕುಶಾಲಾ ಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಹಾಸನದ ಪ್ರಭಾವಿ ರಾಜಕಾರಣಿ ಕುಟುಂಬದ ಸಂಸದರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವ್ಯಾಪಕವಾಗಿ ಹಂಚಿಕೆಯಾಗುತ್ತಿರುವುಕ್ಕೆ ಸಂಬಂಧಿಸಿ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತ ತೀವ್ರ ಕಳವಳ ವ್ಯಕ್ತಪಡಿಸಿದ ಕುಶಾಲಾ ಸ್ವಾಮಿ, ಕೃತ್ಯ ಎಸಗಿರುವ ವ್ಯಕ್ತಿ ಯಾವನೇ ಆಗಿರಲಿ, ನಾವು ಮೊದಲು ಸಂತ್ರಸ್ತೆಯರ ರಕ್ಷಣೆಗೆ ನಿಲ್ಲಬೇಕು. ಸಾವಿರಾರು ಮಹಿಳೆಯರು ವಂಚನೆಗೆ ಒಳಗಾಗಿರುವುದಲ್ಲದೆ, ವಿಡಿಯೊ ಸಾಮಾಜಿಕ ತಾಣಗಳಲ್ಲಿ ಓಡಾಡುತ್ತಿರುವುದರಿಂದ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ನೀಡುವ ಕೆಲಸ ಮೊದಲಾಗಬೇಕು. ಓರ್ವ ಅಭ್ಯರ್ಥಿ ಮೇಲಿನ ರಾಜಕೀಯ ದ್ವೇಷಕ್ಕೆ ಸಾವಿರಾರು ಮಹಿಳೆಯರ ಬದುಕು ನರಕವಾಗುವುದನ್ನು ಸಹಿಸಲಾಗುವುದಿಲ್ಲ. ಅಶ್ಲೀಲ ವಿಡಿಯೊಗಳನ್ನು ಹಂಚಿದರೆ ಅದರಲ್ಲಿರುವ ಮಹಿಳೆಯರ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಕೊಂಚವೂ ಯೋಚಿಸದಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಎರಡು ಸಾವಿರಕ್ಕೂ ಹೆಚ್ಚು ಖಾಸಗಿ ವಿಡಿಯೋಗಳು ಹರಿದಾಡುತ್ತಿವೆ ಎನ್ನಲಾಗುತ್ತಿದೆ. ಅಷ್ಟೂ ಮಂದಿ ಸಂತ್ರಸ್ತೆಯರ ಪರಿಸ್ಥಿತಿ ಏನಾಗಬೇಕು? ಅವರ ಕುಟುಂಬ ಸದಸ್ಯರಿಗೆ ಖಾಸಗಿ ವಿಡಿಯೊಗಳು ಲಭ್ಯವಾದರೆ ಏನೇನು ದುರಂತಗಳಾಗುತ್ತವೆ? ಮುಂದಾಗಬಹುದಾದ ದುಷ್ಪರಿಣಾಮಗಳಿಗೆ ಯಾರು ಹೊಣೆ? ವಿಡಿಯೊಗಳ ಹಂಚಿಕೆಗೆ ತಡೆಯೊಡ್ಡುವ ನಿಟ್ಟಿನಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ? ಹೆಣ್ಮಕ್ಕಳ ಬದುಕು ಬೀದಿಗೆ ಬಿದ್ದರೂ ಬೀಳಲಿ, ನಮಗೆ ರಾಜಕೀಯ ಲಾಭವಾದರೆ ಸಾಕು ಎಂಬ ಧೋರಣೆಯನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದೆಯೇ? ಎಂದು ಖಾರವಾಗಿ ಪ್ರಶ್ನಿಸಿದರು.

ಅಧಿಕಾರದ ಪ್ರಭಾವದಿಂದ ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡಿರುವುದು ಎಷ್ಟು ದೊಡ್ಡ ಅಪರಾಧವೋ, ವಿಡಿಯೊಗಳನ್ನು ಹಂಚಿಕೆ ಮಾಡುತ್ತಿರುವುದೂ ಅಷ್ಟೇ ದೊಡ್ಡ ಅಪರಾಧವಾಗಿದೆ. ಇವರೆಲ್ಲರೂ ಮಹಿಳೆಯರ ಪಾಲಿನ ರಾಕ್ಷಸರಾಗಿದ್ದಾರೆ. ಮಹಿಳೆಯರು ಎಚ್ಚೆತ್ತುಕೊಳ್ಳಬೇಕು, ಯಾವುದೇ ಪ್ರಭಾವಕ್ಕೆ ಒಳಗಾಗಿ ಇಂತಹ ಸಂಕಷ್ಟದ ಪರಿಸ್ಥಿತಿಗೆ ಸಿಕ್ಕಿಹಾಕಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.


Share It

You cannot copy content of this page