ಸುದ್ದಿ

ರೈತನಿಗೆ ಮಾಲ್ ಪ್ರವೇಶ ನಿರ್ಬಂಧ ಖಂಡನೀಯ; ಮಾಲ್ ಸೇರಿ ಇತರೆಡೆ ವಸ್ತ್ರ ಸಂಹಿತೆ :ಡಿಸಿಎಂ ಡಿಕೆಶಿ

Share It

ಬೆಂಗಳೂರು: “ಮಾಲ್ ಸೇರಿ ಯಾವುದೇ ಸ್ಥಳಗಳಿಗೆ ಭೇಟಿ ನೀಡುವವರ ನಿರ್ದಿಷ್ಟ ವಸ್ತ್ರಗಳಿಗೆ ನಿರ್ಬಂಧ ಹೇರದಂತೆ ಮಾರ್ಗಸೂಚಿ ಹೊರಡಿಸಲಾಗುವುದು. ಪಂಚೆ ನಮ್ಮ ಸಂಸ್ಕೃತಿ. ಇದಕ್ಕೆ ಪೂರಕವಾಗಿ ನಿಯಮ ತರಲಾಗುವುದು. ಇಡೀ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಈ ರೀತಿಯ ಘಟನೆಗಳು ನಡೆಯದಂತೆ ನಿಯಮಾವಳಿ ರೂಪಿಸಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ವಿಧಾನಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, “ಮಾಲ್ ಗೆ ಪಂಚೆ ಧರಿಸಿ ಬಂದ ರೈತನನ್ನು ತಡೆದ ವಿಚಾರವಾಗಿ ಶುಕ್ರವಾರ (ಜುಲೈ 19) ವಿಧಾನಸಭೆಯಲ್ಲಿ ಪ್ರಸ್ತಾವನೆ ಮೇಲೆ ಚರ್ಚೆ ನಡೆಸಲಾಗಿತ್ತು. ಈ ವಿಚಾರವಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಹೇಳಿಕೆ ನೀಡಿದ್ದರು. ನಾನು ಶುಕ್ರವಾರ ಗೈರಾಗಿದ್ದ ಕಾರಣ ಈಗ ನನ್ನ ಹೇಳಿಕೆ ನೀಡುತ್ತಿದ್ದೇನೆ” ಎಂದು ಹೇಳಿದರು.

“ಜಿ.ಟಿ ಮಾಲ್ ಗೆ ಪಂಚೆ ಉಟ್ಟುಕೊಂಡು ಬಂದ ರೈತನಿಗೆ ಪ್ರವೇಶ ನೀಡದೆ ಇದ್ದ ಕಾರಣ ಮಾಲ್ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಯಿತು ಹಾಗೂ ತೆರಿಗೆ ಬಾಕಿ ಇದ್ದ ಕಾರಣ ಬೀಗ ಹಾಕಲಾಯಿತು. ಅವರು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ. ಈಗ ಚೆಕ್ ಮುಖಾಂತರ ಬಾಕಿ ತೆರಿಗೆ ಪಾವತಿ ಮಾಡಿದ್ದಾರೆ” ಎಂದರು.

“ಕೆಲವು ಕ್ಲಬ್ ಗಳಲ್ಲಿ ಪಂಚೆ ಹಾಕಿದ್ದರೆ, ಶೂ ಹಾಕದೆ ಇದ್ದರೆ ಒಳಗೆ ಬಿಡುವುದಿಲ್ಲ. ಇದರ ಬಗ್ಗೆಯೂ ಗಮನ ಹರಿಸಿ” ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರು ಮನವಿ ಮಾಡಿದರು.


Share It

You cannot copy content of this page