ದೇಶಕ್ಕೆ ಮತ್ತೇ H5N1 ಭೀತಿ: ಕೇರಳದಲ್ಲಿ ರೋಗಪತ್ತೆ
ಆಲಪ್ಪುಳ(ಕೇರಳ): ದೇಶಕ್ಕೆ ಮತ್ತೇ H5N1 ಭೀತಿ ಆರಂಭವಾಗಿದ್ದು, ಆಲಪ್ಪುಳ ಜಿಲ್ಲೆಯಲ್ಲಿ ಏವಿಯನ್ ಇನ್ಫ್ಲುಯೆನ್ಸ್ ವೈರಸ್ ದೃಢಪಟ್ಟಿದೆ. ವಿಲಕ್ಕುಮಾರಂ ಮತ್ತು ಚೆರುತನ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಿದ್ದ ಬಾತುಕೋಳಿಗಳಲ್ಲಿ ಈ ರೋಗ ಕಂಡುಬಂದಿದೆ.
ಕರೋನಾ ಕಾಣಿಸಿಕೊಂಡಾಗಲೂ ಮೊದಲ ಬಾರಿಗೆ ಕೇರಳದಲ್ಲಿ ಪ್ರಕರಣ ದಾಖಲಾಗಿತ್ತು, ಇದೀಗ ಆಗಾಗ ಕಾಣಿಸಿಕೊಳ್ಳುವ ಹಕ್ಕಿಜ್ವರ ಊ5ಓ1 ಕೂಡ ಕೇರಳದಿಂದಲೇ ಆರಂಭವಾಗಿದೆ. ದೇಶಾದ್ಯಂತ ಈ ರೋಗ ಹರಡುವ ಭೀತಿಯಿದ್ದು, ಸೂಕ್ತ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲು ಕೇರಳ ಸರಕಾರ ತೀಮರ್ಾನಿಸಿದೆ. ಜಿಲ್ಲೆಯಲ್ಲಿ ಬಾತುಕೋಳಿಗಳು ಅಸ್ವಸ್ಥಗೊಂಡಾಗ ಹಕ್ಕಿಜ್ವರದಂತಹ ರೋಗಲಕ್ಷಣ ಗೋಚರಿಸಿದೆ. ತಕ್ಷಣವೇ ಮಾಲೀಕರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆರೋಗ್ಯ ಸಿಬ್ಬಂದಿ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಮಧ್ಯಪ್ರದೇಶದ ಭೋಪಾಲ್ನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಈ ಮಾದರಿಗಳಲ್ಲಿ ಏವಿಯನ್ ಇನ್ಫ್ಲುಯೆನ್ಸ್ ವೈರಸ್ ಇರುವ ಬಗ್ಗೆ ದೃಢಪಟ್ಟಿದೆ.
ಬಾತುಕೋಳಿಗಳಲ್ಲಿ ಹೆಚ್5ಎನ್1 ವೈರಸ್ ಎಂದು ದೃಢಪಟ್ಟ ತಕ್ಷಣವೇ ಜಿಲ್ಲಾಡಳಿತ ಈ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಿದೆ. ಜಿಲ್ಲಾ ಅಧಿಕಾರಿಗಳು ತುತರ್ು ಪರಿಶೀಲನಾ ಸಭೆ ಕರೆದಿದ್ದಾರೆ. ರೋಗ ಪತ್ತೆಯಾದ ಪ್ರದೇಶದಿಂದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾಕು ಪಕ್ಷಿಗಳನ್ನು ಕೊಂದು ನಾಶಪಡಿಸುವ ಪ್ರಕ್ರಿಯೆ ಆರಂಭಿಸಲು ಸಭೆ ನಿರ್ಧರಿಸಿದೆ. ಕ್ಷಿಪ್ರ ಕಾಯರ್ಾಚರಣೆ ಪಡೆ ಮತ್ತು ಸಂಬಂಧಿತ ಪ್ರಾಣಿ ಕಲ್ಯಾಣ ಇಲಾಖೆಯಿಂದ ಆದಷ್ಟು ಬೇಗ ಸಿದ್ಧತೆ ಪೂರ್ಣಗೊಳಿಸಲಾಗುತ್ತಿದೆ. ಈವರೆಗೆ ಯಾವುದೇ ಮನುಷ್ಯರಿಗೆ ಹಕ್ಕಿಜ್ವರ ಹರಡಿರುವ ಬಗ್ಗೆ ವರದಿಯಾಗಿಲ್ಲ.
ಏನಿದು H5N1 ವೈರಸ್: H5N1 ಎಂಬುದು ಪಕ್ಷಿಗಳಲ್ಲಿ ಹೆಚ್ಚಾಗಿ ಕಂಡುಬರುವ ವೈರಸ್. ಇದು ಕೆಲವು ಸಂದರ್ಭಗಳಲ್ಲಿ ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ. ಸೋಂಕಿತ ಪಕ್ಷಿಗಳೊಂದಿಗೆ ನಿಕಟವಾಗಿ ಸಂಪರ್ಕ ಹೊಂದಿದ ಮನುಷ್ಯರಿಗೆ ಈ ವೈರಸ್ ಹರಡುತ್ತದೆ. ಈ ವೈರಸ್ ಅಂಟಿಕೊಂಡ ಬಳಿಕ ಮನುಷ್ಯನಲ್ಲಿ ಕೆಮ್ಮು, ಗಂಟಲು ನೋವು, ಶೀತ, ದೇಹದ ತುಂಬಾ ನೋವು, ತಲೆನೋವು, ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ವಾಂತಿ, ಡಯೇರಿಯಾ ಇತ್ಯಾದಿ ಬಾಧೆಗಳೂ ಕಾಣಿಸಿಕೊಳ್ಳುತ್ತವೆ. ಈ ಎಲ್ಲಾ ರೋಗಲಕ್ಷಣಗಳು 2 ರಿಂದ 8 ದಿನಗಳಲ್ಲಿ ಉಲ್ಬಣಗೊಳ್ಳುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ