ಮಂಡ್ಯ: ಸಾಲಗಾರರ ಕಾಟ ತಾಳಲಾರದೆ ಒಂದೂವರೆ ವರ್ಷದ ಕಂದಮ್ಮ ಸೇರಿದಂತೆ ಮೂವರು ಮಕ್ಕಳು ಮತ್ತು ಪತ್ನಿಗೆ ವಿಷ ನೀಡಿ ಕೊಂದು, ತಾನು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ನಡೆಸಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.
ತಾಲೂಕಿನ ತೆಂಗಿನಭಾಗ ಗ್ರಾಮದ ನರಸಿಂಹ ಎಂಬ ವ್ಯಕ್ತಿ, ಪಟ್ಟಣದಲ್ಲಿ ಕಟಿಂಗ್ ಶಾಪ್ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದಾನೆ. ಮಂಡ್ಯ ತಾಲೂಕಿನ ಬಸರಾಳು ಸಮೀಪದ ಕಂಬದಹಳ್ಳಿ ಗ್ರಾಮದ ಕೀರ್ತನಾ ಎಂಬವರನ್ನು ಮದುವೆಯಾಗಿದ್ದ ಆತನಿಗೆ ಇಬ್ಬರು ಮಕ್ಕಳಿದ್ದರು. ಈ ಹಿಂದೆ ಕ್ರಿಕೆಟ್ ಬೆಟ್ಟಿಂಗ್ ಆಡಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ನರಸಿಂಹ, ಪತ್ನಿಗೆ ಹಣ ತರುವಂತೆ ಪೀಡಿಸುತ್ತಿದ್ದ. ಬಳಿಕ ನ್ಯಾಯ ಪಂಚಾಯಿತಿ ನಡೆಸಿ ಪತ್ನಿಯ ಕುಟುಂಬಸ್ಥರು ಸ್ವಲ್ಪ ಹಣವನ್ನೂ ನೀಡಿದ್ದರು. ಆದರೂ ಸಹ ಆತ ಬದಲಾಗಿರಲಿಲ್ಲ. ಐಪಿಎಲ್ ಪಂದ್ಯಾವಳಿ ಆರಂಭಗೊಂಡ ನಂತರ ಬೆಟ್ಟಿಂಗ್ನಲ್ಲಿ ಮತ್ತಷ್ಟು ಹಣ ಕಳೆದುಕೊಂಡಿದ್ದ.
ಸುಮಾರು 8 ಲಕ್ಷ ರೂ ಸಾಲದ ಹೊರೆಯಿದ್ದ ಕಾರಣ ಮಾನಸಿಕವಾಗಿ ಆತ ಜರ್ಝರಿತನಾಗಿದ್ದ. ಈ ನಡುವೆ ಸಾಲ ಕೊಟ್ಟವರು ಕಾಟ ಕೊಡಲು ಆರಂಭಿಸಿದ್ದರಿಂದ ಈತ ಸಾಲ ತೀರಿಸುವ ಮಾರ್ಗ ಕಾಣದೇ ಪತ್ನಿ ಜೊತೆ ಆಗಾಗ್ಗೆ ಜಗಳ ಮಾಡಿಕೊಳ್ಳುತ್ತಿದ್ದ. ಗುರುವಾರ ಪತ್ನಿ ಕೀರ್ತನಾ ಮತ್ತು ಇಬ್ಬರು ಮಕ್ಕಳಿಗೆ ವಿಷ ನೀಡಿದ್ದು, ಅವರು ಸಾವನ್ನಪ್ಪಿರುವುದನ್ನು ಖಚಿತ ಮಾಡಿಕೊಂಡು ತಾನೂ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮಧ್ಯಾಹ್ನದ ವೇಳೆ ಮನೆಯವರು ಹೋಗಿ ನೋಡಿದಾಗ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದ್ದು, ಸಆವು ಬದುಕಿನ ಹೋರಾಟ ನಡೆಸುತ್ತಿದ್ದಾನೆ.
ಆದರೆ, ಅದಾಗಲೇ ವಿಷ ಸೇವನೆಯಿಂದ ಪತ್ನಿ ಕೀರ್ತನಾ (23) ಹಾಗೂ ಮಕ್ಕಳಾದ ಜಯಸಿಂಹ (4) ಮತ್ತು ಒಂದೂವರೆ ವರ್ಷದ ಮಗು ಮೃತಪಟ್ಟಿದೆ. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 8 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡು ನ್ಯಾಯ ಪಂಚಾಯತಿ ಎಲ್ಲವೂ ನಡೆದಿತ್ತು. ನಾವು ಕೂಡ ಸ್ವಲ್ಪ ಹಣಕಾಸಿನ ನೆರವು ನೀಡಿದ್ದೆವು. ಈ ನಡುವೆ ಸಾಲಗಾರರು ಕೊಟ್ಟ ಕಾಟಕ್ಕೆ ಇಡೀ ಕುಟುಂಬವನ್ನು ಬಲಿ ಕೊಟ್ಟಿದ್ದಾನೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.