ಮಂಡ್ಯ: ಬರ ಬೇಸಿಗೆಯಲ್ಲಿ ಮೊದಲ ಮುಂಗಾರು ಪೂರ್ವ ಮಳೆ ನೀಡುವ ಸಂತಸ ಮತ್ತು ಅದು ಹೊತ್ತು ತರುವ ಸಂಭ್ರಮವೇ ಹಾಗೆ. ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕೃಷ್ಣಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ನಟ ದರ್ಶನ್ ತೂಗುದೀಪ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣಗೌಡ (ಸ್ಟಾರ್ ಚಂದ್ರು) ಪರ ಪ್ರಚಾರ ನಡೆಸಿದರು.
ದರ್ಶನ್ ತೆರೆದ ವಾಹನದಲ್ಲಿ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಜೊತೆಗೆ ಪ್ರಚಾರ ನಡೆಸುತ್ತಾ ಭಾಷಣ ಆರಂಭಿಸಿದರು. ಆದರೆ ಅಷ್ಟರಲ್ಲೇ ಬೇಸಿಗೆಯ ಮೊದಲ ಮಳೆ ಜಿಟ ಪಟ, ಜಿಟ ಪಟ ಅಂತ ಸುರಿಯಿತು. ಇಷ್ಟಾದರೂ
ಅಲ್ಲಿದ್ದ ಜನರು ಮಾತ್ರ ದಿ ಬಾಸ್ ಬಂದ್ರು, ನಮ್ಮೂರಲ್ಲಿ ಮಳೆ ಸುರಿಯಿತು ಅಂತ ಖುಷಿಪಟ್ಟಿರಲಿಕ್ಕೂ ಸಾಕು. ಮಳೆಯಿಂದ ರಕ್ಷಣೆ ಪಡೆಯಲು ಜನ ಓಡಿ ಹೋಗಿ ಮರ ಅಥವಾ ಅಂಗಡಿ ಮುಂಗಟ್ಟುಗಳ ಆಶ್ರಯ ಪಡೆಯುವ ಪ್ರಯತ್ನ ಮಾಡಲಿಲ್ಲ.
ದರ್ಶನ್ ಅವರನ್ನು ನೋಡುವ ಮತ್ತು ಅವರ ಮಾತು ಕೇಳಿಸಿಕೊಳ್ಳುವ ಜೊತೆಗೆ ಬಿರು ಬೇಸಿಗೆಯ ನಡುವೆ ಮಳೆಯಲ್ಲಿ ನೆನೆಯುವ ಉಮೇದಿ ಅವರಿಗೆ! ಕಳೆದ ವರ್ಷ ಮಳೆ ಕೊರತೆಯಿಂದಾಗಿ ಇಡೀ ರಾಜ್ಯದ ಜನ ಕುಗ್ಗಿಹೋಗಿದ್ದಾರೆ, ಅನೇಕ ಕಡೆ ಕುಡಿಯಲು ನೀರಿಲ್ಲ, ಹಸು-ಕರುಗಳು ನೀರಿಗಾಗಿ ಹಪಹಪಿಸುವ ದೃಶ್ಯಗಳನ್ನು ನಾವು ನೋಡುತ್ತಿರುತ್ತೇವೆ. ಬೆಳೆಗಳು ಸಂಪೂರ್ಣ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮಳೆ ಸುರಿಯಲಾರಂಭಿಸಿದರೆ ಜನಕ್ಕೆ ರೋಮಾಂಚನವಾಗದಿರುತ್ತದೆಯೇ? ಆ ಸಂತಸ ಮತ್ತು ಸಂಭ್ರಮವನ್ನು ಮಳೆಯಲ್ಲೂ ದರ್ಶನ್ ಮಾತುಗಳನ್ನು ಕೇಳಿಸಿಕೊಳ್ಳುವ ಮಂಡ್ಯ ಜನರ ಮೊಗದಲ್ಲಿ ಕಂಡು ಬಂತು.