ರಾಜಕೀಯ ಸುದ್ದಿ

ಬಂಡೆ ಸರಕಾರಕ್ಕೆ ಕಂಟಕವಾಗಲಿದೆ ಬೆಂಗಳೂರು ಅಭಿವೃದ್ಧಿ ಖಾತೆ: ಬೆಂಗಳೂರಿಂದಲೇ ಹಾರಬಹುದು ಮೊದಲ ಬಂಡಾಯದ ಬಾವುಟ !

Share It

ಬೆಂಗಳೂರು: ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ಬದಲಿಗೆ ಬೃಹತ್  ನೀರಾವರಿ ಇಲಾಖೆ ಕೊಡಲು ಸಿದ್ಧತೆ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆ. ಒಂದು ವೇಳೆ ಆ ಖಾತೆಯನ್ನು ಕೊಟ್ಟರೆ ರಾಮಲಿಂಗ ರೆಡ್ಡಿ ಒಪ್ಪುವುದು ಅನುಮಾನ ಎನ್ನಲಾಗುತ್ತಿದೆ. 

ಬೆಂಗಳೂರು ಅಭಿವೃದ್ಧಿ ಖಾತೆಯ ಬದಲು ಬೇರ್ಯಾವ ಖಾತೆ ಕೊಟ್ಟರೂ ಅವರು ರಾಜೀನಾಮೆ ನೀಡುವ ಸಾಧ್ಯೆತೆಯಿದೆ. ಇದು ಡಿಕೆ ಶಿವಕುಮಾರ್ ನೇತೃತ್ವದ ಹೊಸ ಸರಕಾರಕ್ಕೆ ಮೊದಲ ತಲೆ ನೋವಾಗಲಿದ್ದು, ಹಿರಿಯ ಹಾಗೂ ಶಿವಕುಮಾರ್ ಆಪ್ತ ಸಚಿವರ ರಾಜೀನಾಮೆ ರಾಜಕೀಯ ಸಂಚಲನವನ್ನೇ ಸೃಷ್ಟಿಮಾಡುವ ಸಾಧ್ಯೆತೆಯಿದೆ. ಇದು ಮತ್ತಷ್ಟು ಸಚಿವರು ಮತ್ತು ಶಾಸಕರ ಅತೃಪ್ತಿ ಸ್ಫೋಟಕ್ಕೆ ಕಾರಣವೂ ಆಗಬಹುದು.

2023 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೇ ರಾಮಲಿಂಗ ರೆಡ್ಡಿ ಅವರಿಗೆ ಬೆಂಗಳೂರು ಅಭಿವೃದ್ಧಿ ಇಲಾಖೆ ಕೊಡುತ್ತಾರೆ ಎಂಬ ಮಾತುಗಳಿದ್ದವು. ಆದರೆ ಸಿದ್ದರಾಮಯ್ಯ ಸಂಪುಟದಲ್ಲಿ ಅವರನ್ನು ಸಾರಿಗೆ ಮಂತ್ರಿಯಾಗಿಯೇ ನೇಮಿಸಲಾಯಿತು. ಬೆಂಗಳೂರು ಉಸ್ತುವಾರಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ವಹಿಸಿಕೊಂಡರು. ಹೀಗಾಗಿ, ರಾಮಲಿಂಗ ರೆಡ್ಡಿ ತಮ್ಮ ಸ್ಥಾನಕ್ಕೂ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದರು.

ಎರಡು ದಿನಗಳ ಕಾಲ ಅಧಿಕಾರ ವಹಿಸಿಕೊಳ್ಳದೆ ಇದ್ದ ರಾಮಲಿಂಗ ರೆಡ್ಡಿ ಅವರನ್ನು ಸ್ವತ ಡಿಕೆ ಶಿವಕುಮಾರ್ ಮತ್ತು ಸಹೋದರ ಸುರೇಶ್ ಭೇಟಿ ಮಾಡಿ ಮನವೊಲಿಸಿ, ತಾವು ಸಿಎಂ ಆಗುತ್ತಿದ್ದಂತೆ ಬೆಂಗಳೂರು ಉಸ್ತುವಾರಿಯನ್ನು ನಿಮಗೆ ಹಸ್ತಾಂತರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಇದೀಗ ಆ ಮಾತು ಮರೆತು ಅವರನ್ನು ಬೆಂಗಳೂರು ಅಭಿವೃದ್ಧಿ ಖಾತೆಯಿಂದ ದಿರ ಇಡುವ ಪ್ರಯತ್ನ ನಡೆದಿದೆ.

ಇದು ಕೊಟ್ಟ ಮಾತಿಗೆ ತಪ್ಪಿದಂತಾಗಲಿದ್ದು, ಬೆಂಗಳೂರು ಅಭಿವೃದ್ಧಿ ಸಚಿವ ಸ್ಥಾನವನ್ನು ರಾಮಲಿಂಗಾ ರೆಡ್ಡಿ ಅವರಿಗೆ ಕೊಡದಿದ್ದರೆ ಅವರು ರಾಜೀನಾಮೆ ಕೊಡುವ ಸಾಧ್ಯತೆಗಳಿವೆ. ಒಂದು ವೇಳೆ ಅವರು ರಾಜೀನಾಮಗೆ ಮುಂದಾದರೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಲಿದೆ. ಇದರಿಂದ ಮತ್ತಷ್ಟು ಜನ ಮುಂದೆ ಬಂಡಾಯ ಸಾರಬಹುದು. ಇದು ಬಂಡೆ ಸರಕಾರಕ್ಕೆ ಬಂಡಾಯದ ಸಂಚಕಾರ ತರಬಹುದು. 

ಪ್ರಸ್ತುತ ಸನ್ನಿವೇಶದಲ್ಲಿ ಡಿಕೆ ಸರಕಾರದ ವಿರುದ್ಧ ಬಂಡಾಯಕ್ಕೆ ಸಣ್ಣ ಕಿಡಿಯೊಂದು ಬೇಕಾಗಿದೆ. ಬೆಂಗಳೂರಿನಿಂದ ಆ ಕಿಡಿ ಹೊತ್ತಿಕೊಂಡಿದ್ದೇ ಆದರೆ ಸಿದ್ದರಾಮಯ್ಯ ಬಳಗದ ಬಹುತೇಕ ಬೆಂಬಲಿಗರು ಸಿಡಿದೇಳುವ ಸಾಧ್ಯತೆಗಳಿವೆ. ಇದು ಬಿಜೆಪಿಗೆ ಬಹುದೊಡ್ಡ ಅಸ್ತ್ರವಾಗುವ ಸಾಧ್ಯತೆಯೂ ಹೆಚ್ಚಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಸಿಎಂ ಮತ್ತು ಹೈಕಮಾಂಡ್ ಬೆಂಗಳೂರು ಖಾತೆಯನ್ನು ದಾಕ್ಷಿಣ್ಯಕ್ಕೆ ಬದಲಿಗೆ ಸಮಯೋಚಿತ ನಿರ್ಧಾರದಲ್ಲಿ ಹಂಚಿಕೆ ಮಾಡುವುದು ಉತ್ತಮ ಎಂಬ ಮಾತುಗಳು ಕೇಳಿಬಂದಿವೆ. 


Share It

You cannot copy content of this page