ಬಸವರಾಜ ಬೊಮ್ಮಾಯಿ ದಮ್ಮು ಮತ್ತು ತಾಕತ್ತಿಲ್ಲದವರು:ಬರ ಪರಿಹಾರ ವಿತರಣೆಯಲ್ಲೂ ನಾಡ ದ್ರೋಹ:ಕೃಷ್ಣ ಭೈರೇಗೌಡ
ಗಜೇಂದ್ರಗಡ: ಮೂರೂವರೆ ದಶಕಗಳ ಕಾಲ ಕಳಸಾ ಬಂಡೂರಿ ನಾಲಾ ಯೋಜನೆಗೆ ಹೋರಾಟ ನಡೆಯುತ್ತಿದ್ದರೂ ಮುಖ್ಯಮಂತ್ರಿ ಆಗಿದ್ದ ವೇಳೆ ಒಮ್ಮೆಯೂ ಚಕಾರ ಎತ್ತದ, ಬರ ಪರಿಹಾರ ವಿತರಣೆಯಲ್ಲೂ ನಾಡ ದ್ರೋಹದ ಮಾತುಗಳನ್ನಾಡಿದ ಬಸವರಾಜ ಬೊಮ್ಮಾಯಿ ದಮ್ಮು ಮತ್ತು ತಾಕತ್ತಿಲ್ಲದವರು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಪಟ್ಟಣದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ನಡೆದ ಬೃಹತ್ ರೋಡ್ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಬೊಮ್ಮಾಯಿ ಅವರು ಈಗಾಗಲೇ ಶಾಸಕರಿದ್ದಾರೆ. ಅವರಿಗೆ ರಾಜಕೀಯವಾಗಿ ಹೊಟ್ಟೆ ತುಂಬಿದೆ. ಆದರೆ ನಮ್ಮ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಜನರ ಸೇವೆ ಮಾಡಬೇಕೆಂಬ ಹಸಿವಿದೆ. ಜೊತೆಗೆ ಇಚ್ಛಾಶಕ್ತಿ ಇದೆ. ಈ ಹಿನ್ನೆಲೆಯಲ್ಲಿ ಸಂವಿಧಾನ ಬದಲಿಸಲು ಹುನ್ನಾರ ನಡೆಸಿರುವ ಬಿಜೆಪಿಯನ್ನು ತಿರಸ್ಕರಿಸಿ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ತಮ್ಮೆಲ್ಲರ ಸೇವೆ ಮಾಡಬೇಕೆಂದು ಚುನಾವಣೆಗೆ ಸ್ಪರ್ಧಿಸಿರುವೆ. ನನಗೂ ಒಂದು ಬಾರಿ ಅವಕಾಶ ನೀಡಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಮೇ. 7ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತ ನೀಡಬೇಕು. ಕ್ರಮ ಸಂಖ್ಯೆ ಒಂದಕ್ಕೆ ಮತ ಚಲಾಯಿಸಿ ಆನಂದಸ್ವಾಮಿ ವಿಜಯಶಾಲಿ ಆಗುವಂತೆ ಬೆಂಬಲಿಸಬೇಕು ಎಂದು ಹೇಳಿದರು.
ಮುಖಂಡರಾದ ಸಿದ್ದಣ್ಣ ಬಂಡಿ, ಶಿವರಾಜ ಘೋರ್ಪಡೆ, ಎಚ್.ಎಸ್.ಸೋಂಪುರ, ವೀರಣ್ಣ ಶೆಟ್ಟರ, ಎ.ಡಿ. ಕೋಲಕಾರ, ಪ್ರಶಾಂತ ರಾಠೋಡ, ಬಸವರಾಜ ಶೀಲವಂತರ, ಚಂಬಣ್ಣ ಚವಡಿ, ರೇಣುಕಾ ಪವಾರ, ಜುಲೀಕಾ ಬೇಗಂ ಹಾಗೂ ಸಹಸ್ರಾರು ಜನರು ಮೆರವಣಿಗೆಯಲ್ಲಿದ್ದರು.