ಬೆಂಗಳೂರು: ಇನ್ನೇನು ಎಲ್ಲವೂ ಮುಗಿದೇಹೋಯ್ತು ಎಂಬ ಹೊತ್ತಿನಲ್ಲಿ ಆರ್‌ಸಿಬಿ ಆರ್ಭಟಿಸಲು ಆರಂಭಿಸಿದೆ. ಸತತ ಮೂರು ಗೆಲುವಿನೊಂದಿಗೆ ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊAಡಿದೆ.
ಗುಜರಾತ್ ಟೈಟಾನ್ಸ್ ವಿರುದ್ಧ ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಜಿಟಿ ತಮ್ಮ 20 ಓವರ್‌ಗಳಲ್ಲಿ ಆರ್‌ಸಿಬಿ ಬೌಲರ್‌ಗಳ ಮುಂದೆ ರನ್ ಗಳಿಸಲು ತಿಣುಕಾಡಿತು. ಮಹಮದ್ ಸಿರಾಜ್, ಕನ್ನಡಿಗ ವೈಶಾಖ್ ವಿಜಯ್‌ಕುಮಾರ್, ಯಶ್ ದಯಾಳ್, ಸ್ವಪ್ನಿಲ್ ಸಿಂಗ್ ಭರ್ಜರಿ ಬೌಲಿಂಗ್ ಪ್ರದರ್ಶನದ ಮೂಲಕ ಕಟ್ಟಿಹಾಕಿದರು.
19.3 ಓವರ್‌ಗಳಲ್ಲೇ ಗುಜರಾತ್ ತಂಡ 147 ರನ್‌ಗಳ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು. ಈ ಮೊತ್ತವನ್ನು 12.1 ಓವರ್‌ಗಳಲ್ಲಿ ಬೆನ್ನತ್ತಿ ಗೆದ್ದರೆ, ರ‍್ಸಿಬಿ ತಂಡದ ರನ್‌ರೇಟ್ ಪಾಸಿಟಿವ್ ಆಗುವ ಸಾಧ್ಯತೆಯಿತ್ತು. ಇದನ್ನೇ ಮನದಲ್ಲಿಟ್ಟುಕೊಂಡು ಆಟವಾಡಿದ ಆರ್‌ಸಿಬಿ ಬ್ಯಾಟರ್‌ಗಳು ವಿಕೆಟ್ ಮೇಲೆ ವಿಕೆಟ್ ಕಳೆದುಕೊಂಡರು. ಆದರೆ, ಅಂತಿಮವಾಗಿ 13.4 ಓವರ್‌ಗಳಲ್ಲಿ ಗುರಿಮುಟ್ಟಿದರು.
ಮೊದಲ ಓವರ್‌ನಲ್ಲಿಯೇ ಎರಡು ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಕಿಂಗ್ ಕೋಹ್ಲಿ ತಮ್ಮ ಆರ್ಭಟ ಆರಂಭಿಸಿದರು. ನಾನೇನು ಕಡಿಮೆಯಿಲ್ಲ ಎಂಬAತೆ ಬ್ಯಾಟ್ ಬೀಸಿದ ನಾಯಕ ಪಾಪ್ ಡುಪ್ಲೆಸಿಸ್, ಎರಡನೇ ಓವರ್‌ನಿಂದಲೇ ಸಿಕ್ಸರ್‌ಗಳ ಸುರಿಮಳೆ ಸುರಿಸಿದರು. ಕೇವಲ 23 ಎಸೆತಗಳಲ್ಲಿ 64 ರನ್ ಸಿಡಿಸಿದ ನಾಯಕ, ಅಂತಿಮವಾಗಿ ವಿಕೆಟ್ ಒಪ್ಪಿಸಿದರು.
ನಾಲ್ಕು ಭರ್ಜರಿ ಸಿಕ್ಸರ್‌ಗಳೊಂದಿಗೆ ಇನ್ನಿಂಗ್ಸ್ ಕಟ್ಟಿದ ಕೋಹ್ಲಿ 27 ಎಸೆತಗಳಲ್ಲಿ 47 ರನ್ ಸಿಡಿಸಿದರು. ಮತ್ತೊಂದು ಬದಿಯಲ್ಲಿ ವಿಕೆಟ್ ಬೀಳುತ್ತಿರುವುದನ್ನು ನೋಡಿ ರಕ್ಷಣಾತ್ಮಕ ಆಟವಾಡುವ ಪ್ರಯತ್ನ ನಡೆಸಿದ ಕೋಹ್ಲಿ ಔಟಾದರು. ನಂತರ ಸತತ ವಿಕೆಟ್ ಬಿದ್ದದ್ದರಿಂದ ಕೆಲಕಾಲ ಆತಂಕ ಮನೆ ಮಾಡಿತ್ತು. ಆದರೆ, ಗುರಿ ಕಡಿಮೆಯಿದ್ದ ಕಾರಣ ಯಾವುದೇ ಸಮಸ್ಯೆಯಿಲ್ಲದಂತೆ ಫಿನಿಶರ್ ದಿನೇಶ್ ಕಾರ್ತಿಕ್ ಹಾಗೂ ಸ್ವಪ್ನಿಲ್ ಸಿಂಗ್ ಪಂದ್ಯವನ್ನು ಗೆಲ್ಲಿಸಿಕೊಟ್ಟರು.
ಮಹಮದ್ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ಕೋಹ್ಲಿ 42 ರನ್‌ಗಳ ಮೂಲಕ ಮರಳಿ ಆರೇಂಜ್ ಕ್ಯಾಪ್ ತಮ್ಮದಾಗಿಸಿಕೊಂಡು ಅತಿಹೆಚ್ಚು ರನ್ ಸ್ಕೋರರ್ ಎನಿಸಿಕೊಂಡರು. ಕನ್ನಡಿಗ ವೈಶಾಖ್ ವಿಜಯ್ ಕುಮಾರ್ ಎರೆಡು ವಿಕೆಟ್ ಪಡೆಯುವ ಜತೆಗೆ, ಎರಡು ಕ್ಯಾಚ್ ಮತ್ತು ಒಂದು ರನ್ ಔಟ್‌ನಲ್ಲಿ ಭಾಗಿಯಾಗಿ ಆಲ್‌ರೌಂಡ್ ಪ್ರದರ್ಶನ ನೀಡಿದರು.