ಬೆಂಗಳೂರು: ಅಕ್ವೇರಿಯಂನಲ್ಲಿ ಮೀನು ಸಾಕಲು ಪೋಷಕರು ಬಿಡಲಿಲ್ಲ ಎಂದು ಬೇಸರಗೊಂಡು 13 ವರ್ಷದ ಬಾಲಕ ಮನೆ ಬಿಟ್ಟು ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಉತ್ತರಹಳ್ಳಿಯ ಗೌಡನಪಾಳ್ಯದಲ್ಲಿ ಈ ಘಟನೆ ನಡೆದಿದೆ. ಕಿಶೋರ್ (13) ನಾಪತ್ತೆಯಾದ ಬಾಲಕ. ಇಂದಿಗೆ ನಾಲ್ಕು ದಿನಗಳು ಕಳೆದರೂ ಮಗನ ಸುಳಿವು ಸಿಗದೆ ಪೋಷಕರು ಕಂಗಾಲಾಗಿದ್ದಾರೆ. ಮೀನು ಸಾಕುವ ಆಸೆ ಹೊಂದಿದ್ದ ಬಾಲಕ ಕಿಶೋರ್, 15 ದಿನಗಳ ಹಿಂದೆ ಅಕ್ವೇರಿಯಂ ಫಿಶ್ ತರುವುದಾಗಿ ಹೇಳಿದ್ದಾನೆ. ಅದಕ್ಕೆ ತಂದೆ ಬೈದಿದ್ದಾರೆ. ಆಗ ಸೈಕಲ್‌ನಲ್ಲಿ ಹೊರ ಹೋಗಿದ್ದ ಕಿಶೋರ್, ರಾತ್ರಿ 11 ಗಂಟೆ ಸುಮಾರಿಗೆ ಜಯನಗರದಲ್ಲಿ ಪತ್ತೆಯಾಗಿದ್ದ.
ಹೀಗಿರುವಾಗ ಜುಲೈ 27ರಂದು ಶಾಲೆಯಿಂದ ಮನೆಗೆ ಬರುವಾಗ ಅಕ್ವೇರಿಯಂ ಫಿಶ್ ತಂದಿದ್ದಾನೆ. ತಮ್ಮ ಜೇಬಿನಿಂದ 200 ರೂಪಾಯಿ ಕೊಂಡೊಯ್ದು ಮೀನು ತಂದಿದ್ದಕ್ಕೆ ಕೋಪಗೊಂಡ ತಂದೆ ನಾಗೇಂದ್ರ ಮಗನಿಗೆ ಒಂದೇಟು ಹೊಡೆದು, ಟ್ಯೂಷನ್‌ಗೆ ಹೋಗುವಂತೆ ಸೂಚಿಸಿ ತಮ್ಮ ಕೆಲಸದ ನಿಮಿತ್ತ ಮನೆಯಿಂದ ಹೊರ ಹೋಗಿದ್ದರು. ಸಂಜೆ ಸುಮಾರು 5 ಗಂಟೆಯ ವೇಳೆಗೆ ಕಿಶೋರ್ ತನ್ನ ಸೈಕಲ್ ಏರಿ ಮನೆಯಿಂದ ಹೊರಟಿದ್ದಾನೆ.
ರಾತ್ರಿ 10 ಗಂಟೆಯಾದರೂ ಮಗ ಮನೆಗೆ ಹಿಂತಿರುಗದೇ ಇದ್ದಾಗ ಆತಂಕಗೊಂಡ ಪೋಷಕರು, ಸಂಬಂಧಿಕರು, ಸ್ನೇಹಿತರು ಹಾಗೂ ಶಾಲೆಯಲ್ಲಿ ವಿಚಾರಿಸಿದ್ದಾರೆ. ಆದರೆ ಎಲ್ಲಿಯೂ ಬಾಲಕನ ಸುಳಿವು ಸಿಕ್ಕಿಲ್ಲ. ತಾಯಿ ಲಕ್ಷ್ಮಿ ಅವರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಮಗನಿಗಾಗಿ ಕಳೆದ ನಾಲ್ಕು ದಿನಗಳಿಂದ ಹಗಲು-ರಾತ್ರಿ ಎನ್ನದೆ ಪೋಷಕರು ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಲಭಿಸಿಲ್ಲ. ಮಗನ ನಾಪತ್ತೆಯಿಂದ ತಂದೆ-ತಾಯಿ ಕಣ್ಣೀರಿಡುತ್ತಿದ್ದು, ಎಲ್ಲಿದ್ದರೂ ಶೀಘ್ರವೇ ಮನೆಗೆ ಹಿಂತಿರುಗುವಂತೆ ಮನವಿ ಮಾಡುತ್ತಿದ್ದಾರೆ.

