ಉಪಯುಕ್ತ ಸುದ್ದಿ

‘ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್

Share It

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆಯೋಜಿಸಿರುವ ಒಂದು ತಿಂಗಳ ಅವಧಿಯ ‘ಕ್ಲೀನ್ ಅಪ್ ಬೆಂಗಳೂರು’ ಅಭಿಯಾನದಲ್ಲಿ ಬೆಸ್ಕಾಂ ಕೈಜೊಡಿಸಿದ್ದು, ಪರಿವರ್ಕತಗಳ ಸ್ಥಳಾಂತರದಿಂದ “ಸುರಕ್ಷಿತ ನಡಿಗೆ”ಯ ಗ್ಯಾರಂಟಿ ನೀಡಲಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ.

ಜಿಬಿಎ ಘೋಷಿಸಿರುವ ಒಂದು ತಿಂಗಳ ‘ಕ್ಲೀನ್ ಅಪ್‌ ಬೆಂಗಳೂರು’ ಅಭಿಯಾನದಲ್ಲಿ ಕೈಜೋಡಿಸಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಶನಿವಾರ ಹಮ್ಮಿಕೊಂಡಿದ್ದ ಪಾದಾಚಾರಿ ಮಾರ್ಗಗಳಲ್ಲಿರುವ ವಿದ್ಯುತ್ ಪರಿವರ್ತಕಗಳನ್ನು ಸ್ಥಳಾಂತರಿಸುವ ಕಾರ್ಯವನ್ನು ವೀಕ್ಷಿಸಿದ ಸಚಿವ ಕೆ.ಜೆ.ಜಾರ್ಜ್ ಅವರು, ಈ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಚಿವ ಕೆ.ಜೆ.ಜಾರ್ಜ್ ಅವರು ಹೆಣ್ಣೂರು ಮುಖ್ಯ ರಸ್ತೆ ಸಮೀಪದ ಚನ್ನಕೇಶವ ಬಡಾವಣೆಯ ಪಾದಚಾರಿ ಮಾರ್ಗದಲ್ಲಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಥಳಾಂತರ ಕಾರ್ಯವನ್ನು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ ಅವರೊಂದಿಗೆ ಪರಿಶೀಲನೆ ನಡೆಸಿದರು. ಸಾರ್ವಜನಿಕರಿಗೆ ಸುರಕ್ಷಿತ ಪಾದಚಾರಿ ಮಾರ್ಗ ಕಲ್ಪಿಸಲು ಆದ್ಯತೆ ಮೇರೆಗೆ ಕೆಲಸ ನಿರ್ವಹಿಸಲು ಸೂಚನೆ ನೀಡಿದರು.

“ನಾಗರಿಕ ಸ್ನೇಹಿಯಾಗಿರುವ ಬೆಸ್ಕಾಂ ಕೂಡ ಜಿಬಿಎ ಜತೆಗೆ ಕ್ಲೀನ್ ಅಪ್ ಬೆಂಗಳೂರು ಅಭಿಯಾನದಲ್ಲಿ ಭಾಗಿಯಾಗಿದೆ. ನಗರದ ಜನತೆಗೆ ಸುರಕ್ಷಿತ ಪಾದಚಾರಿ ಮಾರ್ಗ ಕಲ್ಪಿಸುವುದು ನಮ್ಮ ಕರ್ತವ್ಯವಾಗಿದೆ. ಅಭಿವೃದ್ದಿಗೆ ವಿದ್ಯುತ್ ಮೂಲಸೌಕರ್ಯ ಅಳವಡಿಕೆ ಅವಶ್ಯಕ. ಹೀಗಿದ್ದರೂ ಪಾದಚಾರಿಗಳಿಗೆ ತೊದರೆಯಾಗದಂತೆ ಕೆಲವೆಡೆ ಪಾದಚಾರಿ ಮಾರ್ಗಗಳಲ್ಲಿ ಇರುವ ವಿದ್ಯುತ್ ಪರಿವರ್ತಕಗಳನ್ನು ಕೂಡಲೇ ಸ್ಥಳಾಂತರಿಸುವ ಕೆಲಸಕ್ಕೆ ಬೆಸ್ಕಾಂ ಮುಂದಾಗಿದೆ. ಇನ್ನೊಂದು ತಿಂಗಳಲ್ಲಿ ನಾವು ಜನತೆಗೆ ಸುರಕ್ಷಿತ ಪಾದಚಾರಿ ಮಾರ್ಗ ಹಾಗೂ ಕಸಮುಕ್ತ ವಾತಾವರಣ ನಿರ್ಮಿಸಿಕೊಡಲಿದ್ದೇವೆ. ಬೆಸ್ಕಾಂ ವಿಶೇಷವಾಗಿ ಅಭಿಯಾನದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಲಿದೆ,” ಎಂದು ಸಚಿವರು ಹೇಳಿದರು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಎನ್.ಶಿವಶಂಕರ ಮಾತನಾಡಿ, “ಪಾದಚಾರಿ ಮಾರ್ಗಗಳಲ್ಲಿರುವ ಅನುಪಯುಕ್ತ ಹಾಗೂ ನಿಷ್ಕ್ರಿಯಗೊಂಡ ವಿದ್ಯುತ್ ಮೂಲ ಸೌಕರ್ಯಗಳನ್ನು ತೆರವುಗೊಳಿಸಲಾಗುವುದು. ಮುರಿದಿರುವ, ಹಾನಿಗೊಳಗಾಗಿರುವ ಮತ್ತು ಸವಕಳಿಯಾಗಿರುವ ವಿದ್ಯುತ್ ಕಂಬಗಳನ್ನು ಉಗ್ರಾಣಗಳಿಗೆ ಹಿಂತಿರುಗಿಸಲು ಅಥವಾ ಸೂಕ್ತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ,” ಎಂದರು.

“ಮುಖ್ಯ ರಸ್ತೆಗಳಲ್ಲಿ ಹಾಲಿ ಇರುವ ಡಿಪಿ ಸ್ಟ್ರಕ್ಚರ್‌ ಪರಿವರ್ತಕ ಕೇಂದ್ರಗಳಿಂದ ಪಾದಚಾರಿಗಳಿಗೆ ಅಡಚಣೆಯಾಗುತ್ತಿರುವುದು ಕಂಡುಬಂದಲ್ಲಿ ಅಂತಹ ಪರಿವರ್ತಕಗಳನ್ನು ಸ್ಪೆಷಲ್ ಡಿಸೈನ್ ಪರಿವರ್ತಕ ಕೇಂದ್ರಗಳನ್ನಾಗಿ ಬದಲಾಯಿಸಬೇಕು ಇಲ್ಲವೇ ಸ್ಪನ್ ಪೋಲ್ ಬಳಸಿ ಪರಿವರ್ತಕವನ್ನು ಅಳವಡಿಸಬೇಕು. ಸ್ಪನ್ ಪೋಲ್‌ಅನ್ನು ಅಳವಡಿಸುವಾಗ ಪಾದಚಾರಿ ಮಾರ್ಗದಿಂದ ದೂರವಿರುವಂತೆ ಹಾಗೂ ಪಾದಚಾರಿಗಳಿಗೆ ತೊಡಕಾಗದಂತೆ ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ,” ಎಂದು ತಿಳಿಸಿದರು.

ನೋಡಲ್ ಅಧಿಕಾರಿಗಳ ನೇಮಕ: “ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿರುವ ಕಂಬಗಳಲ್ಲಿ ಜಿಒಎಸ್ ಗಳನ್ನು ಮತ್ತು ತೆರೆಯುವ ಲಿವರ್ ಗಳನ್ನು ಭೂಮಿಯಿಂದ ಕನಿಷ್ಠ 7 ಅಡಿ ಎತ್ತರದಲ್ಲಿರುವಂತೆ ನೋಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಹಾಲಿ ಇರುವ ವಿದ್ಯುತ್ ಮೂಲ ಸೌಕರ್ಯ (ಕಂಬ/ಆರ್.ಎಂ.ಯು /ಪರಿವರ್ತಕ) ಗಳಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿರುವ ಸ್ಥಳಗಳನ್ನು ಗುರುತಿಸಿ ಅವಶ್ಯಕತೆಗನುಗುಣವಾಗಿ ಅವುಗಳನ್ನು ಸ್ಥಳಾಂತರಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು.

ಪರಿವರ್ತಕ ಕೇಂದ್ರದಲ್ಲಿ ಬೆಳೆದಿರುವ ಗಿಡ ಗಂಟೆಗಳನ್ನು ತೆರವುಗೊಳಿಸಸುವುದು ಮತ್ತು ಕಸವನ್ನು ತೆಗೆದು ಪರಿವರ್ತಕ ಕೇಂದ್ರಗಳನ್ನು ಸ್ವಚ್ಛವಾಗಿರಿಸುವ ಕಾರ್ಯವನ್ನು ಅಭಿಯಾನದಲ್ಲಿ ಕೈಗೊಳ್ಳಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದೊಂದಿಗೆ ಸಮನ್ವಯ ಸಾಧಿಸಿ ಹಾಗೂ ಮೇಲುಸ್ತುವಾರಿ ಮಾಡಲು ಬೆಂಗಳೂರು ಮಹಾನಗರ ಉತ್ತರ ವಲಯ ಮತ್ತು ಬೆಂಗಳೂರು ಮಹಾನಗರ ದಕ್ಷಿಣ ವಲಯ ಮುಖ್ಯ ಅಭಿಯಂತರ (ವಿ) ರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.” ಎಂದರು.

ಸಚಿವರ ಪರಿಶೀಲನೆ ವೇಳೆ ಹೆಣ್ಣೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಪುಲಕೇಶಿ, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಬೆಸ್ಕಾಂನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Share It

You cannot copy content of this page