ದೇವನಹಳ್ಳಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಹೆಚ್ಚಿನ ಅಂತರದಿಂದ ನಮ್ಮ ಅಭ್ಯರ್ಥಿ ಕೆ ಸುಧಾಕರ್ ಗೆಲ್ಲಲಿದ್ದಾರೆ. ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸುವುದೇ ನಮ್ಮ ಸಂಕಲ್ಪ ಎಂದು ಮಾಜಿ ಶಾಸಕ ಪಿಳ್ಳ ಮುನಿಶಾಮಪ್ಪ ಹೇಳಿದ್ದಾರೆ.
ಬಿಜೆಪಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿಕೋಟೆಯಲ್ಲಿ ಮತಯಾಚನೆ ನಡೆಸಿ ಅವರು ಮಾತನಾಡಿದರು. ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸುವುದು ನಮ್ಮ ಗುರಿ. ದೇಶದಲ್ಲಿನ ಬಡತನ, ನಿರುದ್ಯೋಗ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿ ಗ್ರಾಮಾಂತರ ಪ್ರದೇಶಗಳ ಕಲ್ಯಾಣಕ್ಕೆ ಬಿಜೆಪಿ ಅಪಾರವಾದ ಕೊಡುಗೆ ನೀಡಿದೆ.
ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಮಣ್ಣಿನ ಆರೋಗ್ಯ ಕಾರ್ಡ್ಗಳು, ಸೂಕ್ಷ್ಮ ನೀರಾವರಿ, ಬೆಳೆ ವಿಮೆ, ಬೀಜ ಪೂರೈಕೆ ಮತ್ತು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೇರ ಆರ್ಥಿಕ ನೆರವು ಸೇರಿದಂತೆ ವಿವಿಧ ಉಪಕ್ರಮಗಳೊಂದಿಗೆ ರೈತರನ್ನು ಸಬಲಗೊಳಿಸುವ ಪ್ರಮುಖ ಅಂಶಗಳನ್ನು ಈ ಬಾರಿಯ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದೆ ಅದೇ ರೀತಿ ಈ ಬಾರಿಯ ಚುನಾವಣೆಯು ಒಂದು ರಾಷ್ಟ್ರ, ಒಂದು ಚುನಾವಣೆ, ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವ ಪಡೆದಿದೆ.
ಜೂನ್ 4 ರ ಚುನಾವಣಾ ಫಲಿತಾಂಶದ ನಂತರ ಪ್ರಣಾಳಿಕೆಯಲ್ಲಿ ಹೇಳಿದಂತಾ ಅಂಶಗಳನ್ನು ಜಾರಿಗೊಳಿಸುವುದನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಗುರಿಯನ್ನಾಗಿಸಿ ಸಂಕಲ್ಪ ಮಾಡಿದ್ದಾರೆ ಅದ್ದರಿಂದ ರಾಷ್ಟ್ರದ ಹಿತದೃಷ್ಟಿಯಿಂದ ಎಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕು, ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವೆಂಕಟಗಿರಿ ಕೋಟೆ ಈರಪ್ಪ, ಆಂಜಿನಪ್ಪ, ಬುಲ್ಲಳ್ಳಿ ರಾಜಪ್ಪ, ಗುರಪ್ಪ, ಕದಿರಪ್ಪ, ಆಂಜಿನಪ್ಪ, ಮುನಿಕೃಷ್ಣ, ಮುನಿರಾಜು, ಶ್ರೀನಿವಾಸ್, ಹನುಮಂತ, ಸಾವಕನಹಳ್ಳಿ ಶ್ರೀನಿವಾಸ್ ಮುಂತಾದ ಮುಖಂಡರುಗಳು ಹಾಗೂ ಬಿಜೆಪಿ ಕಾರ್ಯಕರ್ತರುಗಳು ಇದ್ದರು.