ಲೋಕಸಭೆ ಚುನಾವಣೆ ವೇಳೆ ಬಾಲಿವುಡ್ನ ಮಿಸ್ಟರ್ ಪರ್ಫೆಕ್ಟ್ ನಟ ಆಮಿರ್ ಖಾನ್ ಅವರು ಕಾಂಗ್ರೆಸ್ ವಿರುದ್ಧ ಸಮರಕ್ಕಿಳಿದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ರಾಜಕೀಯ ಜಾಹೀರಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಡೀಪ್ ಫೇಕ್ ವಿಡಿಯೋವನ್ನು ಕಾಂಗ್ರೆಸ್ ಬಳಸಿಕೊಂಡಿದೆ ಎಂದು ಆರೋಪಿಸಿ ಕೇಸ್ ದಾಖಲಿಸಲಾಗಿದ್ದು, ಎಫ್‌ಐಆರ್ ಕೂಡ ಹಾಕಲಾಗಿದೆ.
ನಟ ಆಮಿರ್ ಖಾನ್ ಅವರು ಈ ಹಿಂದೆ ‘ಸತ್ಯಮೇವ್ ಜಯತೇ’ ಎಂಬ ಕಾರ್ಯಕ್ರಮವೊಂದನ್ನು ಮಾಡುತ್ತಿದ್ದರು. ಆ ಕಾರ್ಯಕ್ರಮದ ದೃಶ್ಯವನ್ನು ಇಟ್ಟುಕೊಂಡು ಕಾಂಗ್ರೆಸ್ ಆಡಳಿತಾರೂಢ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ವಿಡಿಯೋ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಹರಿಬಿಡಲಾಗಿದೆ ಎಂದು ಆಮಿರ್ ಖಾನ್ ವಕ್ತಾರ ಮುಂಬೈ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಡೀಪ್ ಫೇಕ್ ಮೂಲಕ ಸೃಷ್ಟಿಸಿರುವ ಕಾಂಗ್ರೆಸ್ ಜಾಹೀರಾತಿನಲ್ಲಿ, ನಾಗರಿಕರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರೂ. ಜಮಾ ಮಾಡುವ ಬಿಜೆಪಿಯ ಭರವಸೆಯನ್ನು ನಟ ಆಮಿರ್ ಖಾನ್ ಅವರು ಟೀಕಿಸುವುದನ್ನು ಕಾಣಬಹುದಾಗಿದೆ.
ಸದ್ಯ ಈ ಪ್ರಕರಣ ಕುರಿತಾಗಿ ಆಮಿರ್ ಖಾನ್ ಅವರ ವಕ್ತಾರ ಮಾತನಾಡಿದ್ದು, ಆಮಿರ್ ಖಾನ್ ಅವರು ತಮ್ಮ 35 ವರ್ಷಗಳ ವೃತ್ತಿಜೀವನದುದ್ದಕ್ಕೂ ಯಾವುದೇ ರಾಜಕೀಯ ಪಕ್ಷವನ್ನು ಅವರು ಟೀಕೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅದಲ್ಲದೇ ಈ ಹಿಂದಿನ ಹಲವು ಚುನಾವಣೆಗಳಲ್ಲಿ ಜಾಗೃತಿ ಅಭಿಯಾನಗಳ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಇದೀಗ ಡೀಪ್‌ಫೇಕ್ ವಿಡಿಯೋ ಮೂಲಕ ಸುಳ್ಳು ಮತ್ತು ದಾರಿತಪ್ಪಿಸುವ ಕೆಲಸವಾಗುತ್ತಿದೆ ಎಂದಿದ್ದಾರೆ.
ಮುಂಬೈ ಪೊಲೀಸರು, ಸೈಬರ್ ಕ್ರೈಂ ಸೆಲ್ ಸೇರಿದಂತೆ ಕಾನೂನು ಅಧಿಕಾರಿಗಳವರೆಗೂ ಆಮಿರ್ ಖಾನ್ ಅವರ ವಿಚಾರ ತಲುಪಿದೆ. ಈ ಕುರಿತಾಗಿ ಪೊಲೀಸ್ ಇಲಾಖೆ ಕೂಡ ಕ್ರಮಕ್ಕೆ ಮುಂದಾಗಿದೆ. ಇದೊಂದು ನಕಲಿ ವಿಡಿಯೋ ಮತ್ತು ಸುಳ್ಳು ಮಾಹಿತಿಯಾಗಿದೆ. ಈ ಹಿನ್ನೆಲೆ ಸೈಬರ್ ಕ್ರೈಂ ಸೆಲ್‌ನಲ್ಲಿ ಎಫ್‌ಐಆರ್ ದಾಖಲಿಸುವುದು ಸೇರಿದಂತೆ ಈ ವಿಷಯಕ್ಕೆ ಸಂಬಂಧಿಸಿದ ವಿವಿಧ ಅಧಿಕಾರಿಗಳಿಗೆ ಅವರು ವರದಿ ಮಾಡಿದ್ದಾರೆ. ಪ್ರತಿಯೊಬ್ಬ ಭಾರತೀಯರು ಕೂಡ ಹೊರಬಂದು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರೊಂದಿಗೆ ಮತ ಚಲಾಯಿಸಬೇಕು ಎಂಬುವುದು ಆಮಿರ್ ಖಾನ್ ಅವರು ಬಯಸುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.