ರಾಜಕೀಯ ಸುದ್ದಿ

ಕರ್ನಾಟಕದ ಮಾವು ಬೆಳೆಗಾರರ ನೆರವಿಗೆ ಬಂದ ಕೇಂದ್ರ:ಆರ್ಥಿಕ ನೆರವು ಘೋಷಣೆ

Share It

ಸಚಿವ ಪ್ರಲ್ಹಾದ ಜೋಶಿ ಮನವಿಗೆ ಮನ್ನಣೆ; ಆರ್ಥಿಕ ನೆರವು ಘೋಷಣೆ

ನವದೆಹಲಿ: ಬೆಲೆ ಕುಸಿತದಿಂದ ಕಂಗೆಟ್ಟಿರುವ ಕರ್ನಾಟಕದ ಮಾವು ಬೆಳೆಗಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ʼಮಾರುಕಟ್ಟೆ ಹಸ್ತಕ್ಷೇಪ ಯೋಜನೆʼಯಡಿ 1.30 ಲಕ್ಷ ಮೆಟ್ರಿಕ್‌ ಟನ್‌ ಮಾವಿಗೆ ಪ್ರತಿ ಕ್ವಿಂಟಲ್‌ಗೆ ₹1,750 ಆರ್ಥಿಕ ನೆರವು ಘೋಷಿಸಿದೆ.

ಹವಾಮಾನ ವೈಪರೀತ್ಯ, ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದಾಗಿ ರಾಜ್ಯದ ಬೆಳೆಗಾರರಿಗೆ ಮಾವು ಹುಳಿಯಾಗಿ ಪರಿಣಮಿಸಿದರೂ ಇದೀಗ ಕೇಂದ್ರ ಸರ್ಕಾರ ಘೋಷಿಸಿದ ಆರ್ಥಿಕ ನೆರವಿನಿಂದ ರಾಜ್ಯದ ಬೆಳೆಗಾರರು ತುಸು ನಿರಾಳರಾಗುವಂತಾಗಿದೆ.

ಕಳೆದ ಐದಾರು ದಿನಗಳ ಹಿಂದಷ್ಟೇ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ರಾಜ್ಯದ ಮಾವು ಬೆಳೆಗಾರರ ಸಂಕಷ್ಟದ ಬಗ್ಗೆ ಕೃಷಿ ಸಚಿವ ಶಿವರಾಜಸಿಂಗ್‌ ಚೌಹಾಣ್‌ ಅವರಿಗೆ ಪತ್ರ ಬರೆದು ಮನವರಿಕೆ ಮಾಡಿಕೊಟ್ಟಿದ್ದರು. ಬೆಲೆ ಕೊರತೆ ಪಾವತಿ ಯೋಜನೆ(ಪಿಡಿಪಿಎಸ್)ಯಡಿ ನೆರವಾಗುವಂತೆ ಒತ್ತಾಯಿಸಿದ್ದರು.

ಜೋಶಿ ಅವರ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಸಚಿವರು, ರಾಜ್ಯದ ಮಾವು ಬೆಳೆಗಾರರ ಸಂಕಷ್ಟಕ್ಕೆ ನೆರವಾಗುವಲ್ಲಿ ತ್ವರಿತ ಕ್ರಮ ಕೈಗೊಂಡಿದ್ದು, ಆರ್ಥಿಕ ನೆರವು ನೀಡಲು ಅನುಮೋದನೆ ನೀಡಿದ್ದರ ಬಗ್ಗೆ ಇಂದು(ಜೂ.24) ಸಚಿವ ಪ್ರಲ್ಹಾದ ಜೋಶಿ ಅವರಿಗೂ ಪತ್ರ ಬರೆದು ಮಾಹಿತಿ ಹಂಚಿಕೊಂಡಿದ್ದಾರೆ.

ಕರ್ನಾಟಕದ ಮಾವು ಬೆಳೆಗಾರರ ಹಿತರಕ್ಷಣೆಗೆ ಮುಂದಾದ ಕೇಂದ್ರ ಸರ್ಕಾರ, ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ (MIS)ಯಡಿ ಬೆಲೆ ಕೊರತೆ ಪಾವತಿ (PDP) ಅನುಷ್ಠಾನಕ್ಕೆ ಕ್ರಮ ಕೈಗೊಂಡಿದೆ. MIS ಮಾರ್ಗಸೂಚಿಯಂತೆ 2026-27ರ ಮಾರುಕಟ್ಟೆ ಹಂಗಾಮಿನಲ್ಲಿ ಕರ್ನಾಟಕದಲ್ಲಿ ತೋತಾಪುರಿ ಮಾವಿಗೆ ಬೆಲೆ ಕೊರತೆ ಪಾವತಿಯನ್ನು ಜಾರಿಗೆ ತರಲು ನಿರ್ದೇಶಿಸಿದೆ.

MIS ಅಡಿಯಲ್ಲಿ ನೆರವು ಘೋಷಿಸಿರುವ ಕೇಂದ್ರ ಸರ್ಕಾರ, ಗರಿಷ್ಠ 1,30,000 MTವರೆಗೆ ಅನ್ವಯಿಸುವಂತೆ ಪ್ರತಿ ಕ್ವಿಂಟಲ್‌ಗೆ ₹1,750 ಸಹಾಯಧನ ನಿಗದಿಪಡಿಸಿದ್ದು, ರಾಜ್ಯ ಸರ್ಕಾರಕ್ಕೆ ಮಾರ್ಗಸೂಚಿ ಹೊರಡಿಸಿದೆ.

2026-27ರ ಹಂಗಾಮಿನಲ್ಲಿ ಒಂದು ತಿಂಗಳವರೆಗೆ ʼಬೆಲೆ ಕೊರತೆ ಪಾವತಿ ಅನುಷ್ಠಾನʼ ಜಾರಿಯಲ್ಲಿರುತ್ತದೆ. ಬೆಲೆ ಕೊರತೆ ಪಾವತಿ ಅಡಿಯಲ್ಲಿ ಪ್ರಯೋಜನ ಪಡೆಯುವ ರೈತರು ತಮ್ಮ ಉತ್ಪನ್ನಗಳನ್ನು ಕರ್ನಾಟಕದ ಅಧಿಸೂಚಿತ APMC ಮಂಡಿಗಳಲ್ಲಿ ವ್ಯಾಪಾರ ಮಾಡಬೇಕು.

ರಾಜ್ಯ ಸರ್ಕಾರ, 2026-27ರ ಮಾರುಕಟ್ಟೆ ಋತುವಿಗಾಗಿ MIS ಅಡಿಯಲ್ಲಿ ಬೆಲೆ ಕೊರತೆ ಪಾವತಿ ಅಡಿಯಲ್ಲಿ ತೋತಾಪುರಿ ಮಾವಿನ ವ್ಯಾಪಾರಿಗಳ ಪಟ್ಟಿ ಪ್ರಕಟಿಸಬೇಕು. ನೋಂದಾಯಿತ ರೈತರಿಗೆ ಬೆಲೆ ನಷ್ಟ ಪಾವತಿಯನ್ನು ನೇರ ಲಾಭ ವರ್ಗಾವಣೆ (DBT)/ಆಧಾರ್ ಪರಿಶೀಲಿಸಿದ ಬ್ಯಾಂಕ್ ಖಾತೆ ಮೂಲಕವೇ ಭರಿಸಬೇಕು ಎಂದು ಸೂಚಿಸಲಾಗಿದೆ.

ಮಾವು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಇಲ್ಲಿನ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ತುಮಕೂರು, ಮಂಡ್ಯ, ಚನ್ನರಾಯಪಟ್ಟಣ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತೋತಾಪುರಿ ಬೆಳೆಯುತ್ತಿದ್ದು, ಲಕ್ಷಾಂತರ ರೈತರು ಕೇಂದ್ರದ ಆರ್ಥಿಕ ನೆರವಿನ ಪ್ರಯೋಜನ ಪಡೆಯಲಿದ್ದಾರೆ.

ರಾಜ್ಯದ ಮಾವು ಬೆಳೆಗಾರರ ಹಿತಾಸಕ್ತಿ ಕಾಪಾಡಲು ಅಗತ್ಯ ಕ್ರಮ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಸಚಿವರಿಗೆ ಸಚಿವ ಪ್ರಲ್ಹಾದ ಜೋಶಿ ಅವರು ರಾಜ್ಯದ ಸಮಸ್ತ ರೈತರ ಪರವಾಗಿ ಧನ್ಯವಾದ ಅರ್ಪಿಸಿದ್ದಾರೆ.


Share It

You cannot copy content of this page