ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಉತ್ತರಕಾಂಡ ಚಿತ್ರದ ನಾಯಕರಿಯಾಗಿ ಚೈತ್ರಾ ಆಚಾರ್ ಆಯ್ಕೆಯಾಗಿದ್ದು, ಚಿತ್ರತಂಡವನ್ನು ಕೂಡಿಕೊಂಡಿದ್ದಾರೆ.
ಬಹುನಿರೀಕ್ಷಿತ ಚಿತ್ರ ‘ಉತ್ತರಕಾಂಡ’. ಚಿತ್ರದ ಮುಹೂರ್ತದಿಂದಲೂ ಟೈಟಲ್ನಿಂದಲೇ ಟಾಕ್ ಆಗುತ್ತಿದೆ. ಉತ್ತರಕಾಂಡ ಚಿತ್ರದಿಂದ ಮೋಹಕ ತಾರೆ ರಮ್ಯಾ ಹೊರನಡೆದಿರುವುದು ಗೊತ್ತಿರುವ ವಿಚಾರ. ಈ ಮಧ್ಯೆ ಈ ಚಿತ್ರದ ನಾಯಕಿ ಯಾರಾಗ್ತಾರೆ ಎಂಬ ಕುತೂಹಲ ಸಿನಿ ಪ್ರೇಮಿಗಳಲ್ಲಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಚೈತ್ರಾ ಆಚಾರ್ ಅಧಿಕೃತವಾಗಿ ಉತ್ತರಕಾಂಡ ಚಿತ್ರ ತಂಡಕ್ಕೆ ಸೇರ್ಪಡೆ ಆಗಿದ್ದಾರೆ.
ಲಚ್ಚಿ ಎಂಬ ಒಂದು ಮುಖ್ಯ ಪಾತ್ರಕ್ಕಾಗಿ ಚೈತ್ರಾ ಬಣ್ಣ ಹಚ್ಚಲಿದ್ದಾರೆ. ಉತ್ತರಕಾಂಡ ಚಿತ್ರದ ಭಾಗವಾಗುತ್ತಿರುವುದಕ್ಕೆ ಸಹಜವಾಗಿ ಚೈತ್ರಾ ಖುಷಿಯಾಗಿದ್ದಾರೆ. ಇದಕ್ಕೆ ಕಾರಣ ಚಿತ್ರದ ಸ್ಟಾರ್ ಕಾಸ್ಟ್. ಡೈರೆಕ್ಟರ್ ಮತ್ತು ದೊಡ್ಡ ನಿಮರ್ಾಣ ಸಂಸ್ಥೆ ಅನ್ನುವುದು ಒಂದು ಕಾರಣವಾದರೆ, ಮೊದಲಿಂದಲೂ ಚೈತ್ರಾ ಆಚಾರ್ ತಮ್ಮನ್ನು ತಾವು ಸವಾಲಿನ ಪಾತ್ರಕ್ಕೆ ಒಡ್ಡಿಕೊಂಡಿರುವ ನಟಿಯಾಗಿದ್ದಾರೆ. ಮರ ಸುತ್ತುವ ಪಾತ್ರಕ್ಕೆ ಮಣೆ ಹಾಕಿದವರಲ್ಲ ಚೈತ್ರಾ.
ಇನ್ಶುರೆನ್ಸ್ ಏಜೆಂಟ್ ರತ್ನಾಕರನ ಬದುಕಿನ ಮೂಲಕ, ಸಂಬಂಧಗಳಿಗೆ ಹೊಸ ಅರ್ಥ ಹುಡುಕುವ ಪ್ರಯತ್ನವನ್ನು ‘ರತ್ನನ್ ಪ್ರಪಂಚ’ ಚಿತ್ರದ ಮೂಲಕ ಮಾಡಿದ್ದ ರೋಹಿತ್ ಪದಕಿ, ತಮ್ಮ ಕನಸಿನ ‘ಉತ್ತರಕಾಂಡ’ದ ಚಿತ್ರೀಕರಣ ಆರಂಭಿಸಿದ್ದಾರೆ. ಹೆಚ್ಚು ಕಡಿಮೆ ಎರಡು ವರ್ಷಗಳಿಂದ ಬಯಲು ಸೀಮೆಯ ಸಂಸ್ಕೃತಿಯ ಸಂಶೋಧನೆ ಹಾಗೂ ಅನ್ವೇಷಣೆ ಮಾಡಿ ತಮ್ಮ ತಂಡದೊಂದಿಗೆ ಅಖಾಡಕ್ಕೆ ಧುಮುಕಿದ್ದಾರೆ.