೪೦೦ಕ್ಕೂ ಹೆಚ್ಚು ಕಟ್ಟಡಗಳ ತೆರವಿಗೆ ಬಿಬಿಎಂಪಿ ಆದೇಶ
ತೆರವು ಮಾಡದಿದ್ದರೆ, ಬಿಬಿಎಂಪಿಯಿಂದಲೇ ತೆರವು
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ಕಟ್ಟಡಗಳ ತೆರವಿಗೆ ಬಿಬಿಎಂಪಿ ಖಡಕ್ ಸೂಚನೆ ನೀಡಿದ್ದು, ಕಾಲಮಿತಿಯಲ್ಲಿ ತೆರವು ಮಾಡಿದ್ದರೆ, ಬಿಬಿಎಂಪಿಯೇ ಜೆಸಿಬಿ ನುಗ್ಗಿಸಲು ತೀರ್ಮಾನಿಸಿದೆ.
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಹೆಚ್ಚಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಸಣ್ಣ ಸಣ್ಣ ಮಳೆಗೂ ಅನೇಕ ಅವಾಂತರಗಳು ಸೃಷ್ಟಿಯಾಗುತ್ತವೆ. ಇಂತಹ ಅನಾಹುತಗಳನ್ನು ತಡೆಯಲು ಬಿಬಿಎಂಪಿ ಯಾವಾಗಲೂ ಅಲರ್ಟ್ ಆಗಿರಲೇಬೇಕು. ಅದರ ಭಾಗವಾಗಿ ಇದೀಗ ಬಿಬಿಎಂಪಿ ಆಪರೇಷನ್ ಜೆಸಿಬಿ ಆರಂಭಿಸಿದೆ.
ಮಳೆಗಾಲದ ಅನಾಹುತಗಳಲ್ಲಿ ನಗರದಲ್ಲಿರುವ ಶಿತಿಲವಾಗಿರುವ ಕಟ್ಟಡಗಳು ಧರೆಗುರುಳುವುದು ಕೂಡ ಒಂದು. ಹೀಗಾಗಿ, ಈ ಬಾರಿಯ ಮಳೆಗಾಲದಲ್ಲಿ ಶಿಥಿಲ ಕಟ್ಟಡಗಳಿಂದ ಅನಾಹುತವಾಗುವುದನ್ನು ತಡೆಯಲು ಬಿಬಿಎಂಪಿ ತೀರ್ಮಾನಿಸಿದೆ. ಇದರ ಭಾಗವಾಗಿ ನಗರದಲ್ಲಿರುವ ೪೦೦ ಕ್ಕೂ ಹೆಚ್ಚು ಕಟ್ಟಡಗಳ ತೆರವಿಗೆ ತೀರ್ಮಾನಿಸಿದೆ.
ಮಾಲೀಕರಿಗೆ ನೊಟೀಸ್ :
ನಗರದಲ್ಲಿ ಹಳೇಯ ಮತ್ತು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣವಾಗಿರದ ಕಟ್ಟಡಗಳನ್ನು ಬಿಬಿಎಂಪಿ ಗುರುತಿಸಿದೆ. ಮಾಲೀಕರಿಗೆ ಈ ಬಗ್ಗೆ ನೊಟೀಸ್ ನೀಡಿ, ಅವುಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಒಂದು ವೇಳೆ ಮಾಲೀಕರು ತೆರವು ಮಾಡಲು ಮೀನಾಮೇಷ ಎಣಿಸಿದರೆ, ಬಿಬಿಎಂಪಿಯೇ ಕಟ್ಟಡಗಳನ್ನು ತೆರವುಗೊಳಿಸುತ್ತದೆ. ಅದಕ್ಕೆ ತಗಲುವ ವೆಚ್ಚವನ್ನು ಮಾಲೀಕರಿಂದ ವಸೂಲಿ ಮಾಡಲು ತೀರ್ಮಾನಿಸಿದೆ.
ಅನಾಹುತ ತಪ್ಪಿಸಲು ಕ್ರಮ:
ಪ್ರತಿ ವರ್ಷ ಮಳೆಗಾಲದಲ್ಲಿ ಒಂದಲ್ಲ ಒಂದು ಶಿಥಿಲ ಕಟ್ಟಡ ಬಿದ್ದು ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಾಹುತಗಳಾಗುತ್ತವೆ. ಕನಿಷ್ಠ ಮೂರರಿಂದ ನಾಲ್ಕು ಜನ ಇಂತಹ ಘಟನೆಯಿಂದಲೇ ಸಾವನ್ನಪ್ಪುತ್ತಿದ್ದಾರೆ. ನೂರಾರು ವಾಹನಗಳು ಜಖಂಗೊಳ್ಳುತ್ತಿವೆ. ಹೀಗಾಗಿ, ಶಿಥಿಲ ಕಟ್ಟಡಗಳ ತೆರವಿಗೆ ಬಿಬಿಎಂಪಿ ಯೋಜನೆ ರೂಪಿಸಿದೆ. ಇದಕ್ಕೆ ಕಟ್ಟಡ ಮಾಲೀಕರು ಸಹಕರಿಸಬೇಕು, ತೆರವು ಮಾಡಬೇಕು ಇಲ್ಲವಾದಲ್ಲಿ ತೆರವು ಮಾಡಲು ಬಿಬಿಎಂಪಿ ಜತೆಗೆ ಸಹಕಾರ ನೀಡಬೇಕು ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.
ಶಿಥಿಲ ಕಟ್ಟಡಗಳ ವಿವರ:
ಪೂರ್ವವಲಯ 101
ಪಶ್ಚಿಮವಲಯ 160
ದಕ್ಷಿಣ ವಲಯ 216
ಬೊಮ್ಮನಹಳ್ಳಿ 11
ದಾಸರಹಳ್ಳಿ 11
ಮಹದೇವಪುರ 31
ರಾಜರಾಜೇಶ್ವರಿ ನಗರ 9
ಉತ್ತರವಲಯ 81