ನೇಹಾ ಹಿರೇಮಠ್ ಮನೆಗೆ ಸಿಎಂ ಭೇಟಿ: ಪೋಷಕರಿಗೆ ಸಾಂತ್ವನ
ನೇಹಾ ಹಿರೇಮಠ್ ಕೊಲೆ ಅತ್ಯಂತ ದುರದೃಷ್ಟಕರ: ತ್ವರಿತ ವಿಚಾರಣೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆಗೆ ಕಾನೂನಿನ ರೀತ್ಯಾ ಕ್ರಮ: ಸಿಎಂ ಸಿದ್ದರಾಮಯ್ಯ
ಹುಬ್ಬಳ್ಳಿ:
ನೇಹಾ ಹಿರೇಮಠ್ ಕೊಲೆ ಅತ್ಯಂತ ದುರದೃಷ್ಟಕರ ಘಟನೆ.ತ್ವರಿತ ವಿಚಾರಣೆಗಾಗಿ ಸಿಒಡಿ ಗೆ ಪ್ರಕರಣವನ್ನು ವಹಿಸಲಾಗಿದೆ. ಜೊತೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ. ಪ್ರತ್ಯೇಕ ವಿಚಾರಣೆ ಮಾಡಿ ಕೊಲೆ ಆರೋಪಿಗೆ ಆದಷ್ಟು ಕಠಿಣ ಶಿಕ್ಷೆ ಕೊಡಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಹುಬ್ಬಳ್ಳಿಯಲ್ಲಿ ಕೊಲೆಯದ ನೇಹಾ ಹಿರೇಮಠ್ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ನೊಂದ ಕುಟುಂಬ ವರ್ಗದವರಿಗೆ ಸಾಂತ್ವನ
ಬಿಜೆಪಿಯವರು ಸಿಬಿಐ ಗೆ ಪ್ರಕರಣ ವಹಿಸಲು ಆಗ್ರಹಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದೆ. ಯಾವುದಾದರೂ ಒಂದು ಪ್ರಕರಣವನ್ನು ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಸಿಬಿಐ ಗೆ ಕೊಟ್ಟಿಲ್ಲ. ನನ್ನ ಅವಧಿಯಲ್ಲಿ ಅನೇಕ ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೇನೆ. ಇದರಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ರಾಜಕೀಯದ ಬಗ್ಗೆ ಇಲ್ಲಿ ಮಾತನಾಡುವುದು ಸೂಕ್ತವಲ್ಲ. ನೊಂದ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಲು ಬಂದಿದ್ದೇನೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದು, ಅವರೊಂದಿಗೆ ನಾವು ಇರುತ್ತೇವೆ ಎಂದರು. ನೇಹಾ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದರು.
ಎಲ್ಲಾ ದೃಷ್ಟಿಯಿಂದಲೂ ತನಿಖೆ
ಫಯಾಜ್ ಗೆ ಕುಮ್ಮಕ್ಕು ಕೊಟ್ಟವರ ಬಂಧನವಾಗಬೇಕು ಹಾಗೂ ಕುಟುಂಬದವರಿಗೆ ಜೀವ ಬೆದರಿಕೆ ಇರುವುದರಿಂದ ರಕ್ಷಣೆ ನೀಡಬೇಕೆಂಬ ಕುಟುಂಬದವರ ಬೇಡಿಕೆ ಇರುವ ಬಗ್ಗೆ ಮಾತನಾಡಿ ಅಗತ್ಯ ಬಿದ್ದರೆ ರಕ್ಷಣೆ ಕೊಡುತ್ತೇವೆ. ಎಲ್ಲಾ ದೃಷ್ಟಿಯಿಂದಲೂ ತನಿಖೆ ಕೈಗೊಳ್ಳುವಂತೆ ತಿಳಿಸಿದ್ದೇನೆ ಎಂದರು.
ತನಿಖೆ ಮಾಡಿ ಅಪರಾಧ ಪಟ್ಟಿ ಹಾಕಿದ ನಂತರ ವಿಚಾರಣೆ ಮಾಡಲಾಗುತ್ತದೆ. ಕಾಲೇಜ್ ಕ್ಯಾಂಪಸ್ ನಲ್ಲಿ ಭದ್ರತೆ ಬಗ್ಗೆ ಪ್ರತಿಕ್ರಿಯೆ ನೀಡಿ ನೇಹಾ ತಂದೆ ಹೇಳಿದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ನೇಹಾ ತಂದೆ ನಿರಂಜನ್ ಮಾತನಾಡಿ ನೇಹಾ ಕೊಲೆ ಊಹಿಸಿದ ರೀತಿಯಲ್ಲಿ ನಡೆದಿದ್ದು ಎಲ್ಲಾ ರಾಜಕೀಯ ಪಕ್ಷಗಳು ತೀವ್ರವಾಗಿ ಖಂಡಿಸಿದ್ದಾರೆ. ಹೋರಾಟ ಮಾಡಿದ್ದಾರೆ. ಈ ಹೋರಾಟದಿಂದ ನಮಗೂ ಶಕ್ತಿ ಬಂದಿದೆ. ರಾಜ್ಯದ ಎಲ್ಲೆಡೆಯಿಂದ ಬೆಂಬಲ ದೊರಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಹೆಚ್ .ಕೆ.ಪಾಟೀಲ್ , ಉಸ್ತುವಾರಿ ಸಚಿವ ಸಂತೋಷ್ ಲಾಡ್, ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿನೋದ್ ಆಸೂಟಿ ಸೇರಿದಂತೆ ಅನೇಕ ಮುಖಂಡರು, ಶಾಸಕರು ಬೆಂಬಲಿಸಿದ್ದಾರೆ.
ನೇಹಾ ಹತ್ಯೆಗೆ ನ್ಯಾಯ ದೊರಕಿಸಿಕೊಡಲು ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಡಿಸಿಎಂ ಡಿಕೆಶಿವಕುಮಾರ್ ಹಾಗೂ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು ವಿವಿಧ ಸಂಘಸಂಸ್ಥೆಗಳ ವರದಿಗಳು ಹಾಗೂ ನಮ್ಮ ಬೇಡಿಕೆಗಳನ್ನು ಪರಿಶೀಲಿಸಿ, ನಾಲ್ಕನೇ ದಿನಕ್ಕೆ ತುರ್ತಾಗಿ ತನಿಖೆಗೆ ಆದೇಶವನ್ನು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಫಾಸ್ಟ್ ಟ್ರ್ಯಾಕ್ ವಿಶೇಷ ಕೋರ್ಟ್ ಸ್ಥಾಪಿಸಬೇಕೆಂಬ ನಮ್ಮ ಬೇಡಿಕೆಯನ್ನು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾನೂನು ಸಚಿವರು ಎಲ್ಲರೂ ಕೂಡಿ ನಡೆಸಿಕೊಟ್ಟಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದರು.
ಸಿಐಡಿ ತನಿಖೆಯನ್ನು ಈಗಾಗಲೇ ಪ್ರಾರಂಭ ಮಾಡಿದ್ದಾರೆ. ಈ ಸಾವಿನ ಪ್ರಕರಣದಲ್ಲಿ ನನ್ನ ಬೆನ್ನಿಗೆ ನಿಂತ ಎಲ್ಲರ ಪರವಾಗಿ ಈ ರೀತಿಯ ಪ್ರಕರಣಗಳ ಬಗ್ಗೆ ರಚಿಸಬೇಕಾದ ಕಾನೂನಿನ ಬೇಡಿಕೆಯನ್ನು ಈಡೇರಿಸುವಂತೆ ಕೋರುತ್ತಾ, ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಿದ್ದಕ್ಕಾಗಿ ಹಾಗೂ ಸಿಐಡಿಗೆ ವಹಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿಯಾಗಿರುವ ಸುರ್ಜೆವಾಲ ಅವರು ನನ್ನನ್ನು ಭೇಟಿ ಮಾಡಿ ಪ್ರಕರಣದ ಬಗ್ಗೆ ವಿವರ ಪಡೆದಿದ್ದು, 90 ದಿನದೊಳಗೆ ಅಥವಾ ಗರಿಷ್ಠ 120 ದಿನದೊಳಗೆ ನ್ಯಾಯ ಒದಗಿಸುವುದಾಗಿ ಅದರಲ್ಲಿಯೂ ಆರೋಪಿಗೆ ಗಲ್ಲು ಶಿಕ್ಷೆ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ. ಆರೋಪಿಗೆ ಗಲ್ಲು ಶಿಕ್ಷೆ ವಹಿಸುವ ಮೂಲಕ ಪ್ರಕರಣಕ್ಕೆ ನ್ಯಾಯ ಒದಗಿಸಬೇಕು ಎಂದು ಸಿಎಂ, ಡಿಸಿಎಂ ಹಾಗೂ ಇನ್ನಿತರ ಪ್ರಮುಖ ನಾಯಕರನ್ನು ಕೋರುವುದಾಗಿ ನೇಹಾ ತಂದೆ ನಿರಂಜನ್ ತಿಳಿಸಿದರು. ನನ್ನ ಮನೆಗೆ ವರಿಷ್ಠರು ಭೇಟಿ ನೀಡಿ ನನಗೆ ಸಾಂತ್ವನ ನೀಡಿ ಧೈರ್ಯ ತುಂಬಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.