ರಾಜಕೀಯ ಸುದ್ದಿ

ಮತದಾನ ಮಾಡಲು ಬೆಂಗಳೂರಿನಿಂದ ಹೊರಟರು ಮತದಾರರು

Share It

ಬೆಂಗಳೂರು: ಶುಕ್ರವಾರ ರಾಜ್ಯದಲ್ಲಿ ನಡೆಯಲಿರುವ ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಜನರು ಊರುಗಳತ್ತ ತೆರಳುತ್ತಿದ್ದು ನಗರದಲ್ಲಿ ಬಸ್ಗಳು, ರೈಲುಗಳು ಫುಲ್ ರಶ್ ಆಗಿವೆ.

ಮತದಾನ ಮಾಡಲು ಬೆಂಗಳೂರಿನಲ್ಲಿ ನೆಲೆಸಿರುವ ಮೊದಲ ಹಂತದ 14 ಲೋಕಸಭಾ ಕ್ಷೇತ್ರದ ಜನರು ರಾತ್ರಿಯೇ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ಆದರೆ ಚುನಾವಣಾ ಕಾರ್ಯಕ್ಕೆ ಸಾರಿಗೆ ಬಸ್ಗಳನ್ನು ಬಳಸಿಕೊಳ್ಳಲಾಗಿದ್ದು, ಕೊರತೆ ಎದುರಾದ ಹಿನ್ನೆಲೆಯಲ್ಲಿ ಇರುವ ಬಸ್ಗಳಲ್ಲಿ ಜನ ಫುಲ್ ರಶ್ ಆಗಿದೆ. ಮೈಸೂರು, ಮಂಡ್ಯ, ಹಾಸನ, ತುಮಕೂರು, ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ, ಚಿತ್ರದುರ್ಗ ಸೇರಿದಂತೆ ವಿವಿಧ ತಾಲೂಕು ಜಿಲ್ಲೆಗಳಿಗೆ ತಳ್ಳಲು ರಾತ್ರಿಯೇ ಜನರು ಬಸ್ ನಿಲ್ದಾಣಕ್ಕೆ ಜಮಾಯಿಸಿದ್ದರು.

ಇಂದು ಬೆಳಗ್ಗೆ ಕೂಡ ಮೆಜೆಸ್ಟಿಕ್, ಸ್ಯಾಟಲೈಟ್ ಬಸ್ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಕೆಲವರು ಸಾರಿಗೆ ಬಸ್ಗಳ ರಶ್ ನೋಡಿ ಖಾಸಗಿ ಬಸ್ಗಳತ್ತ ಮುಖ ಮಾಡಿದ್ದು, ಇದನ್ನೆ ಬಂಡವಾಳವನ್ನಾಗಿ ಮಾಡಿಕೊಂಡ ಕೆಲ ಖಾಸಗಿ ಬಸ್ನವರು ಟಿಕೆಟ್ ದರ ಹೆಚ್ಚಳ ಮಾಡಿದ್ದರು. ಆದರೂ ಅನಿವಾರ್ಯವಾಗಿ ಜನರು ತೆರಳಿದರು. ಇನ್ನೂ ಕೆಲವರು 15 ದಿನಗಳ ಹಿಂದೆಯೇ ಮುಂಗಡವಾಗಿ ಟಿಕೆಟ್ಗಳನ್ನು ಬುಕ್ಕಿಂಗ್ ಮಾಡಿಕೊಂಡು ತೆರಳಿದರು. ಕೆಲವರು ಇಂದು ಸಂಜೆ ಕೆಲಸ ಮುಗಿಸಿಕೊಂಡು ಖಾಸಗಿ ಕಾರು, ಟ್ರಾವೆಲ್ಸ್ , ಬೈಕ್ಗಳಲ್ಲಿ ತೆರಳಿದ್ದಾರೆ.

ಹೀಗಾಗಿ ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನಗಳವರೆಗೆ ಜನಸಂಖ್ಯೆ ಕಡಿಮೆಯಾಗಲಿದೆ. ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಮತದಾನ ಮುಗಿದ ಬಳಿಕ ಬೆಂಗಳೂರಿನ ಜನಸಂಖ್ಯೆ ಕೊಂಚ ಹೆಚ್ಚಾಗುವ ಸಾಧ್ಯತೆ ಇದೆ. ಆದಾಗ್ಯೂ ಮೇ 7 ರಂದು ನಡೆಯುವ ಬಾಕಿ ಉಳಿದ 14 ಕ್ಷೇತ್ರಗಳ ರಾಜ್ಯದ 2ನೇ ಹಂತದ ಲೋಕಸಭಾ ಚುನಾವಣೆಗೆ ಪ್ರಚಾರ ಕೆಲಸಕ್ಕೆ ಬೆಂಗಳೂರಿನ ದುಡಿಯುವ ವರ್ಗದ ಕೆಳಹಂತದ ಜನರು ತಮ್ಮ ತಮ್ಮ ಊರುಗಳತ್ತ ಶನಿವಾರದಿಂದಲೇ ಪ್ರಯಾಣ ಬೆಳೆಸುವ ನಿರೀಕ್ಷೆ ಇದೆ.


Share It

You cannot copy content of this page