ಬೆಂಗಳೂರು: ಈ ಬಾರಿಯ 2024 ರ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಗುರಿಯನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹೊಂದಿತ್ತು. ಆದರೆ ರಾಜ್ಯ ಗುಪ್ತಚರ ಇಲಾಖೆ ವರದಿ ಪ್ರಕಾರ ಕನಿಷ್ಠ 11 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ.
2019ರ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ 25ರಲ್ಲಿ ಬಿಜೆಪಿ ಗೆಲುವು ಸಾಧಿಸಿ ದಾಖಲೆ ಬರೆದಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಲಾ 1 ಸ್ಥಾನಕ್ಕೆ ಕುಸಿದಿದ್ದವು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ 28 ಸ್ಥಾನಗಳ ಪೈಕಿ 28ರಲ್ಲೂ ಗೆಲ್ಲುವ ವಿಶ್ವಾಸವನ್ನು ಎರಡೂ ಪಕ್ಷಗಳ ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಗೆದ್ದು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಒತ್ತಡವಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಪ್ತಚರ ವರದಿಯನ್ನು ತರಿಸಿಕೊಂಡಿದ್ದಾರೆ.
ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ಕಾಂಗ್ರೆಸ್ 13 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ತುಮಕೂರು, ಉಡುಪಿ-ಚಿಕ್ಕಮಗಳೂರು, ಬೀದರ್, ಚಿಕ್ಕೋಡಿ, ಚಿತ್ರದುರ್ಗ, ರಾಯಚೂರು, ದಾವಣಗೆರೆ ಕಾಂಗ್ರೆಸ್ ಗೆಲ್ಲಲಿದೆ.
ಇನ್ನು ಹಾವೇರಿ, ಕಲಬುರಗಿ, ಮಂಗಳೂರು, ಮೈಸೂರು ಮತ್ತು ಹಾಸನ ಕ್ಷೇತ್ರಗಳಲ್ಲಿ ಸಮಬಲದ ಹೋರಾಟ ನಡೆಯಲಿದ್ದು, ಯಾರೇ ಗೆದ್ದರೂ ಅತ್ಯಂತ ಅಲ್ಪ ಮತಗಳಿಂದ ಗೆಲ್ಲುವ ಸಾಧ್ಯತೆ ಇದೆ. ಆದರೆ ಪ್ರಯತ್ನಿಸಿದರೆ ಈ ಲೋಕಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆಯ ವರದಿ ಹೇಳಿದೆ.
ಗುಪ್ತಚರ ಇಲಾಖೆ ವರದಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತುಷ್ಠರಾಗಿದ್ದು, ಸಮಬಲ ಇರುವ ಕ್ಷೇತ್ರಗಳಲ್ಲಿ ಗೆಲ್ಲುವ ತಂತ್ರಗಾರಿಕೆ ರೂಪಿಸಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.