ಬೆಂಗಳೂರು: ಕೊಲೆ ಕೇಸಲ್ಲಿ ಜೈಲು ಸೇರಿರುವ ದರ್ಶನ್ ಆ್ಯಂಡ್ ಗ್ಯಾಂಗ್ ನಿತ್ಯ ಪರದಾಡ್ತಿದೆ. ಇತ್ತ ಖಾಕಿ ತನಿಖೆ ತೀವ್ರಗೊಳಿಸಿದ್ದು, ಡಿ ಗ್ಯಾಂಗ್‌ನ ಮತ್ತೊಂದು ಸ್ಫೋಟಕ ರಹಸ್ಯ ಬಯಲಾಗಿದೆ.
ಮನೆಯೂಟ ಕೊಡಿ ಅಂತಾ ಕಾಡಿ ಬೇಡಿದರೂ ದರ್ಶನ್ ಪಾಲಿಗೆ ಅನ್ನಭಾಗ್ಯ ಸಿಗ್ತಿಲ್ಲ. ಹೀಗಾಗಿ ಪಾಲಿಗೆ ಬಂದಿದ್ದೇ ಪಂಚಾಮೃತ ಅಂದ್ಕೊಂಡಿರೋ ದರ್ಶನ್, ಜೈಲು ವಾತಾವರಣಕ್ಕೆ ದಿನೇ ದಿನೇ ಹೊಂದ್ಕೊಳ್ತಿದ್ದಾರೆ. ಇಷ್ಟು ದಿನ ಮೌನವಾಗಿರ್ತಿದ್ದ ದಾಸ, ಈಗ ಜೈಲು ಸಿಬ್ಬಂದಿ ಜೊತೆ ಮಾತನಾಡೋದಕ್ಕೆ ಶುರು ಮಾಡಿದ್ದಾರೆ. ಬ್ಯಾರಕ್ನಿಂದ ಹೊರಗೆ ಬಂದು ಬೆಳಗ್ಗೆ, ಸಂಜೆ ವಾಕ್ ಮಾಡ್ತಿದ್ದಾರಂತೆ.
ಇತ್ತ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಒಂದೇ ಒಂದು ಸಣ್ಣ ಸಾಕ್ಷ್ಯವನ್ನೂ ಬಿಡದ ಪೊಲೀಸರು ದರ್ಶನ್ ಹಾಗೂ ಪವಿತ್ರಾರ ಸಿಮ್ ಸೀಕ್ರೆಟ್ ಬಯಲು ಮಾಡೋದಕ್ಕೆ ಮುಂದಾಗಿದ್ದಾರೆ. ಕೊಲೆ ಬಳಿಕ ಇಬ್ಬರೂ ಸಹ ಸಿಮ್ ಬದಲಿಸಿದರು ಅನ್ನೋ ಅನುಮಾನವಿದೆ. ಹೀಗಾಗಿ ಮನೋಜ್ ಹಾಗೂ ಹೇಮಂತ್ ಅನ್ನೋರಿಗೆ ಪೊಲೀಸರು ಡ್ರಿಲ್ ಮಾಡಿದ್ದಾರೆ. ನೀವು ಕೊಟ್ಟ ಸಿಮ್ ಯಾರ ಹೆಸರಿನಲ್ಲಿದೆ, ಯಾವ ಕಾರಣಕ್ಕೆ ಕೊಟ್ರಿ ಅಂತೆಲ್ಲಾ ಮಾಹಿತಿ ಕಲೆಹಾಕುತ್ತಿದ್ದಾರೆ.
ಇದೆಲ್ಲದರ ಮಧ್ಯೆ ಪಟ್ಟಣಗೆರೆ ಶೆಡ್ನಲ್ಲಿದ್ದ ಸಿಸಿಟಿವಿಯೇ ಡಿಗ್ಯಾಂಗ್ಗೆ ಕಂಟಕವಾಗುವ ಸುಳಿವು ನೀಡ್ತಿದೆ. ಕೊಲೆ ನಡೆದ ರಾತ್ರಿ ಏನೆಲ್ಲಾ ಆಯ್ತು ಅನ್ನೋದು ಆ ಒಂದು ಸಿಸಿಟಿವಿಯಲ್ಲಿ ಸೆರೆಯಾಗಿದ್ಯಂತೆ. ಜೂನ್ 8 ರಂದು ಪಟ್ಟಣಗೆರೆ ಶೆಡ್‌ನಲ್ಲಿ ಡಿಗ್ಯಾಂಗ್ನಿಂದ ಹಲ್ಲೆಗೊಳಗಾಗಿದ್ದ ಸ್ವಾಮಿ ನಿತ್ರಾಣಗೊಂಡಿದ್ದರು. ಹೀಗಾಗಿ ಶೆಡ್‌ನಿಂದ ಸೆಕ್ಯೂರಿಟಿ ರೂಮ್‌ಗೆ ಸ್ವಾಮಿಯನ್ನ ಕರೆತಂದಿದ್ದರಂತೆ. ಇದಾದ ಬಳಿಕವೇ ಸ್ವಾಮಿ ಸಾವನ್ನಪ್ಪಿದ್ದನಂತೆ.
ಇದೆಲ್ಲವೂ ಕೂಡಾ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು. ಹೀಗಾಗಿ ಸಿಸಿಟಿವಿ ಫೂಟೇಜ್ ಡಿಲೀಟ್ ಮಾಡಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ ಆರೋಪಿಗಳು ಜೂನ್ 8ರ ಸಂಜೆ 7 ಗಂಟೆಯಿಂದ 12:30ರವರೆಗೆ ನಡೆದ ಎಲ್ಲಾ ಫೂಟೇಜ್ ಡಿಲಿಟ್ ಮಾಡಿದ್ದರಂತೆ. ಹೀಗಾಗಿ ಡಿವಿಆರ್ ವಶಕ್ಕೆ ಪಡೆದಿರುವ ಪೊಲೀಸರು ವಿಡಿಯೋ ರಿಟ್ರೀವ್ಗಾಗಿ ಹೈದ್ರಾಬಾದ್‌ನ FSLಗೆ ರವಾನಿಸಿದ್ದಾರೆ. ಈ ವಿಡಿಯೋ ಸಿಕ್ಕರೆ ಪ್ರಕರಣಕ್ಕೆ ಪ್ರಮುಖ ಸಾಕ್ಷ್ಯವಾಗಲಿದೆ.
ಸ್ವಾಮಿ ಕೊಲೆ ಕೇಸ್ ನಲ್ಲಿ ದಿನಕ್ಕೊಂದು ಬೆಳವಣಿಗೆ ಆಗ್ತಿದ್ದು, ಡಿ ಗ್ಯಾಂಗ್ ಗೆ ಕಾನೂನು ಕುಣಿಕೆ ಬಿಗಿಯಾಗ್ತಿರೋದು ಮಾತ್ರ ಸುಳ್ಳಲ್ಲ. ಇನ್ನು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಜೈಲೂಟ ಬೇಡ ಮನೆಯೂಟ ಬೇಕು ಎಂದು ದರ್ಶನ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ 24ನೇ ಎಸಿಎಂಎಂ ಕೋರ್ಟ್, ವೈದ್ಯಕೀಯ ಪರೀಕ್ಷೆಯ ವರದಿ ಸಲ್ಲಿಸುವಂತೆ ಹೇಳಿದೆ. ಹೀಗಾಗಿ ನಟ ದರ್ಶನ್ಗೆ ಸದ್ಯಕ್ಕೆ ಜೈಲೂಟವೇ ಗತಿ ಆಗಿದೆ.
ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಆಕ್ಷೇಪಣೆ ಸಲ್ಲಿಕೆ
ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಆಕ್ಷೇಪಣೆ ಸಲ್ಲಿಕೆ ಮಾಡಲು ಕಾಲಾವಕಾಶ ಕೋರಿದ್ರು. ಮಂಗಳವಾರ ಆಕ್ಷೇಪಣೆಗೆ ಸಲ್ಲಿಕೆಗೆ ಅವಕಾಶ ಕೋರಿದ್ದಾರೆ. ನಾಡಿದ್ದು ದರ್ಶನ್ ಮೆಡಿಕಲ್ ರಿಪೋರ್ಟ್ ಬರಲಿದೆ. ಫುಡ್ ಪಾಯಿಸನ್ ಬಗ್ಗೆ ಹೇಳಿದ್ದಾರೆ ಹೀಗಾಗಿ ಅವಕಾಶ ಬೇಕು. ಮಂಗಳವಾರ ವಿಚಾರಣೆ ನಡೆಸಲು ಸರ್ಕಾರದ ಪರ ವಕೀಲರು ನ್ಯಾಯಾಧೀಶರ ಬಳಿ ಮನವಿ ಮಾಡಿದ್ದಾರೆ. ವಾದ ಆಲಿಸಿದ ನ್ಯಾಯಾಧೀಶರು ಸೋಮವಾರಕ್ಕೆ ವಿಚಾರಣೆ ಮುಂದೂಡಿದ್ದಾರೆ. ಹೀಗಾಗಿ ನಟ ದರ್ಶನ್ಗೆ ಮತ್ತೆರಡು ದಿನ ಜೈಲೂಟವೇ ಗತಿ ಆಗಿದೆ.