ಬೆಂಗಳೂರು : ನಟ ದರ್ಶನ್ ಪ್ರಕರಣದಲ್ಲಿ ನಾವು ಮಧ್ಯ ಪ್ರವೇಶ ಮಾಡಲ್ಲ, ಪ್ರಕರಣ ಸಂಬಂಧ ಕಾನೂನಿನಡಿ ತನಿಖೆ ನಡೆಯುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ತೂಗದೀಪ ಭೇಟಿ ಮಾಡಿದ ನಂತರ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಇಂದು ನನ್ನನ್ನು ಭೇಟಿಯಾದ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ತಮ್ಮ ಪುತ್ರನ ಶಾಲೆಯ ಸೇರ್ಪಡೆ ಬಗ್ಗೆ ಮಾತ್ರ ಚರ್ಚೆ ಮಾಡಿದ್ದಾರೆ. ದರ್ಶನ್ ವಿಚಾರ ಚರ್ಚೆ ಮಾಡಿಲ್ಲ ಎಂದರು.
ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ತಮ್ಮ ಮಗನನ್ನು ಬೇರೆ ಸ್ಕೂಲ್ ಸೇರಿಸಿದ್ದರು. ಈಗ ಪುತ್ರನನ್ನು ನಮ್ಮ ಶಾಲೆಗೆ ಸೇರಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದರೆ ದರ್ಶನ್ ಬಗ್ಗೆ ಏನೂ ಮಾತನಾಡಿಲ್ಲ.
ಕೇವಲ ತಮ್ಮ ಮಗನ ಸ್ಕೂಲ್ ಸೇರ್ಪಡೆ ಕುರಿತು ಚರ್ಚೆ ನಡೆಸಿದ್ದಾರೆ. ದರ್ಶನ್ ಪ್ರಕರಣ ತನಿಖೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಇನ್ನು ನಿನ್ನೆ ರಾಮನಗರದ ಕರಗಕ್ಕೆ ಹೋದಾಗ ಅಭಿಮಾನಿಗಳು ಡಿಬಾಸ್ ಅಂತ ಘೋಷಣೆ ಕೂಗಿದ್ದರು. ಏನಾದರೂ ಅನ್ಯಾಯ ಆಗಿದ್ದರೆ ಸರಿಪಡಿಸಲಾಗುವುದು ಎಂದು ಹೇಳಿದ್ದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.