ರಾಜಕೀಯ ಸುದ್ದಿ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಬಲ್ ಸೆಕ್ಯುರಿಟಿ

Share It

ಬೆಂಗಳೂರು, (ಏಪ್ರಿಲ್ 24): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇದೇ ಏಪ್ರಿಲ್‌ 26ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಇನ್ನು ಅತಿ ಸೂಕ್ಷ್ಮ ಲೋಕಸಭಾ ಕ್ಷೇತ್ರವೆಂದು ಪರಿಗಣಿಸಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಬಲ್ ಸೆಕ್ಯೂರಿಟಿ ಸಿಸ್ಟಮ್ ಅನ್ನು ಅಳವಡಿಕೆ ಮಾಡಲಾಗಿದೆ.

ಇಲ್ಲಿಗೆ ಒಟ್ಟು 7 ಪ್ಯಾರಾ ಮಿಲಿಟರಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ, 28 ಲೋಕಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ, ಮತದಾನ ಪ್ರಕ್ರಿಯೆಯ ನಿಯಮಗಳನ್ನು ಸಹ ಚುನಾವಣಾ ಆಯೋಗವು ಪ್ರಕಟಿಸಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎಲ್ಲ ಮತಗಟ್ಟೆಯಲ್ಲಿ ಶೇಕಡಾ 100 ವೆಬ್ ಕಾಸ್ಟಿಂಗ್ ಮಾಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಅಕ್ರಮಗಳು ನಡೆಯಬಹುದು

ಈ ಕ್ಷೇತ್ರದಲ್ಲಿ ಪ್ರಭಾವಿ ಎದುರಾಳಿಗಳು ಆಡಳಿತಯಂತ್ರವನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚಿನ ಭದ್ರತೆ ಹಾಗೂ ಅರೆ ಸೇನಾ ಪಡೆಯನ್ನು ನಿಯೋಜನೆ ಮಾಡುವಂತೆ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್.‌ ಮಂಜುನಾಥ್ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ರಾಜ್ಯ ಚುನಾವಣಾ ಆಯೋಗ ಮನವಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರವಾನೆ ಮಾಡಿತ್ತು. ಅಲ್ಲಿಂದ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿತ್ತು. ಅದರನ್ವಯ ಕ್ರಮ ವಹಿಸಲಾಗಿದೆ. ಕೋರಿಕೆಯಂತೆ ಹೆಚ್ಚು ಭದ್ರತೆ ಮಾಡಲಾಗಿದೆ ಎಂದರು.

ಒಟ್ಟು 5.47 ಕೋಟಿ ಮತದಾರರು: ಕರ್ನಾಟಕದ 28 ಲೋಕಸಭಾ ಕ್ಷೇತ್ರದಲ್ಲಿ ಒಟ್ಟಾರೆ ಮತದಾರರ ಸಂಖ್ಯೆಯನ್ನು ಸಹ ಚುನಾವಣಾ ಆಯೋಗವು ಬಿಡುಗಡೆ ಮಾಡಿದೆ. ಇದರ ಅನುಸಾರ ಒಟ್ಟು 5,47,36,835 ಮತದಾರರು ಸಂಸತ್‌ ಚುನಾವಣೆ ಭವಿಷ್ಯ ಬರೆಯಲಿದ್ದಾರೆ. ಇದಲ್ಲದೆ, ಮತದಾರರು ಯಾವ ದಾಖಲೆಗಳನ್ನು ತರಬೇಕು? ಮತದಾನ ಪ್ರಕ್ರಿಯೆಯ ನಿಯಮಗಳು ಏನು? ಕೊನೆಯ 48 ಗಂಟೆಯ ಶೂನ್ಯ ಅವಧಿಗೆ ಸಂಬಂಧಪಟ್ಟಂತೆ ಇರುವ ನಿಯಮಗಳೇನು? ಎಂಬಿತ್ಯಾದಿ ಅಂಶಗಳನ್ನು ಚುನಾವಣಾ ಆಯೋಗ ಪ್ರಕಟಿಸಿದೆ.

ಇದುವರೆಗೆ 23 ಕೇಸ್ ದಾಖಲು: ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಇದುವರೆಗೆ 23 ಕೇಸ್ ದಾಖಲಾಗಿದೆ. ಬಿಜೆಪಿ 12, ಕಾಂಗ್ರೆಸ್ 9, ಹಾಗೂ ಜೆಡಿಎಸ್ ಮೇಲೆ 2 ಪ್ರಕರಣಗಳು ದಾಖಲಾಗಿವೆ. ಇನ್ನಿತರ ನಾಯಕರ ಮೇಲೆ 5 ಕೇಸ್‌ಗಳು ದಾಖಲಾಗಿವೆ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವಿಚಾರವಾಗಿ ದೂರು ಸಲ್ಲಿಕೆಯಾಗಿದೆ. ಈ ಕುರಿತು ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಮೇಲ್ನೋಟಕ್ಕೆ ಸಾಬೀತಾದರೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಮನೋಜ್‌ ಕುಮಾರ್ ಮೀನಾ ತಿಳಿಸಿದರು.

ಆಂಬ್ಯಲೆನ್ಸ್‌ ನಿಯೋಜನೆ: ಈಗ ಬೇಸಿಗೆ ಕಾಲವಾಗಿದ್ದರಿಂದ ಬಿಸಿಲಿನ ಪ್ರಮಾನ ಹೆಚ್ಚಿದೆ. ಹೀಗಾಗಿ ಮತದಾನದ ವೇಳೆ ಬಿಸಿಲಿನ ಕಾರಣಕ್ಕಾಗಿ ಏನಾದರೂ ಸಮಸ್ಯೆಯಾಗಬಹುದು ಎಂಬ ಕಾರಣಕ್ಕಾಗಿ ಆಂಬ್ಯುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗಿದೆ. ತುರ್ತು ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮನೋಜ್‌ ಕುಮಾರ್ ಮೀನಾ ಮಾಹಿತಿ ನೀಡಿದರು.


Share It

You cannot copy content of this page