ಅಪರಾಧ ಸುದ್ದಿ

ಐಸಿಸ್ ಸಂಘಟನೆಗೆ ಯುವಕರ ನೇಮಕಾತಿ, ಅಕ್ರಮ ಹಣ ಸಂಗ್ರಹ ಆರೋಪ: ಬೆಂಗಳೂರು ಸೇರಿ 8 ಕಡೆ ಇಡಿ ದಾಳಿ

Share It

​ಬೆಂಗಳೂರು: ಐಸಿಸ್‌ ಸಂಘಟನೆಗೆ ಯುವಕರ ನೇಮಕಾತಿ, ಅದಕ್ಕಾಗಿ ಅಕ್ರಮ ಹಣ ಸಂಗ್ರಹ ಹಾಗೂ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬೆಂಗಳೂರು ಸೇರಿ ಕರ್ನಾಟಕದ 8 ಕಡೆ ಮಂಗಳವಾರ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲಿಸಿದ್ದ ಎಫ್‌ಐಆರ್‌ ಆಧಾರದ ಮೇಲೆ ತನಿಖೆ ತೀವ್ರ ಗೊಳಿಸಿರುವ ಇಡಿ ಅಧಿಕಾರಿಗಳು, ‘ಇಕ್ರಾ ವೆಲ್ಫೇರ್ ಟ್ರಸ್ಟ್’, ‘ಗೈಡೆನ್ಸ್ ಫಾರ್ ಮ್ಯಾನ್‌ಕೈಂಡ್’ ಸಂಸ್ಥೆ ಹಾಗೂ ಕೆಲ ವ್ಯಕ್ತಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಐಸಿಸ್‌ಗೆ ಯುವಕರನ್ನು ಸೇರ್ಪಡೆಗೊಳಿಸುತ್ತಿರುವ ಆರೋಪಕ್ಕೆ ಸಂಬಂಧಿಸಿ ಈಗಾಗಲೇ ಐವರು ಆರೋಪಿಗಳ ವಿರುದ್ಧ ಎನ್‍ಐಎ ಚಾರ್ಜ್‌ಶೀಟ್ ಸಲ್ಲಿಸಿದೆ.​ ಬಂಧಿತ ಆರೋಪಿಗಳು ಐಸಿಸ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು, ಅಮಾಯಕ ಮುಸ್ಲಿಂ ಯುವಕರನ್ನು ಪ್ರಚೋದಿಸಿ ಉಗ್ರವಾದದತ್ತ ಸೆಳೆಯಲು ನಿಗೂಢ ಸಂಚು ರೂಪಿಸಿದ್ದರು ಎಂದು ಎನ್‍ಐಎ ಆರೋಪಿಸಿದೆ.

ವ್ಯಕ್ತಿತ್ವ ವಿಕಸನದ ನೆಪದಲ್ಲಿ ನಡೆಯುತ್ತಿದ್ದ ಇಕ್ರಾ ಕ್ಯಾಂಪ್ ಎಂಬ ಶಿಬಿರ ಹಾಗೂ ಕುರಾನ್ ಸರ್ಕಲ್ ಎಂಬ ವಾರಾಂತ್ಯದ ಕೂಟಗಳ ಮೂಲಕ ಯುವಕರಿಗೆ ತರಬೇತಿ ನೀಡಿ ಐಸಿಸ್‌ಗೆ ನೇಮಿಸಿಕೊಳ್ಳಲಾಗುತ್ತಿತ್ತು. ಅಷ್ಟೇ ಅಲ್ಲದೆ, ಈ ಗುಂಪು ಹಣ ಸಂಗ್ರಹಿಸಿ, ನಕಲಿ ಹಾಗೂ ಅಕ್ರಮ ಮಾರ್ಗಗಳ ಮೂಲಕ ಯುವಕರನ್ನು ಟರ್ಕಿ ಮಾರ್ಗವಾಗಿ ಸಿರಿಯಾಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡುತ್ತಿತ್ತು.

ಭಾರತ ಸರ್ಕಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಸಿರಿಯಾ ಸರ್ಕಾರದ ವಿರುದ್ಧ ಹೋರಾಡಲು ಯುವಕರನ್ನು ಪ್ರಚೋದಿಸುತ್ತಿದ್ದುದು ತನಿಖೆಯಲ್ಲಿ ಬೆಳಕಿಗೆ ಬಂದಿರುವುದಾಗಿ ಎನ್‌ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ವಿವರಿಸಿತ್ತು.

ದೇಶದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿದ್ದ ಸಂದರ್ಭ ದುರ್ಬಳಕೆ ಮಾಡಿಕೊಂಡು ಗೌಪ್ಯವಾದ ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಐಸಿಸ್ ಸಿದ್ಧಾಂತಗಳೆಡೆ ಸೆಳೆಯಲಾಗುತ್ತಿತ್ತು. ಆ ಯುವಕರನ್ನು ಸಿರಿಯಾಗೆ ಕಳುಹಿಸಲು ಕೆಲವು ವ್ಯಕ್ತಿಗಳಿಂದ, ಟ್ರಸ್ಟ್‌ಗಳಿಂದ ಹಣ ಕ್ರೋಢೀಕರಿಸಲಾಗುತ್ತಿತ್ತು ಎಂದು ಇ.ಡಿ ಮೂಲಗಳು ಮಾಹಿತಿ ನೀಡಿವೆ.


Share It

You cannot copy content of this page